ಹಳ್ಳದಲ್ಲಿ ಸಿಕ್ಕ ರೈತ ಬಚಾವ್- ಅಗ್ನಿಶಾಮಕ ದಳ, ಪೊಲೀಸ್ ಕಾರ್ಯಾಚರಣೆ ಯಶಸ್ವಿ
ಧಾರವಾಡ: ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ಬಳಿಯ ಹಳ್ಳದಲ್ಲಿ ಸಿಲುಕಿಕೊಂಡಿದ್ದ ರೈತನನ್ನ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಯಶಸ್ವಿಯಾಗಿದ್ದಾರೆ.
ತಮ್ಮ ಜಮೀನಿಗೆ ಕೆಲಸಕ್ಕೆ ಹೋಗಿದ್ದ ಹೇಮರೆಡ್ಡಿ ನಾವಳ್ಳಿ ಎಂಬ ರೈತ ಸಂಜೆ ಮನೆಗೆ ಬರುವಾಗ ಹಳ್ಳದಲ್ಲಿ ಸಿಲುಕಿಕೊಂಡಿದ್ದರು. ಈ ವಿಷಯ ರಾತ್ರಿ ಗ್ರಾಮಸ್ಥರಿಗೆ ಗೊತ್ತಾಗಿ, ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದರು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದ ಪಿಎಸೈ ಜಯಪಾಲ ಪಾಟೀಲ, ಕತ್ತಲು ಕವಿದಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನ ಕರೆಸಿಕೊಂಡಿದ್ದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ರೈತ ಹೇಮರೆಡ್ಡಿ ನಾವಳ್ಳಿಯವರನ್ನ ಬೋಟ್ ಮೂಲಕ ರಕ್ಷಣೆ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ, ಹಳ್ಳದ ದಡಕ್ಕೆ ರೈತನನ್ನ ಕರೆದುಕೊಂಡು ಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ನವಲಗುಂದ ವ್ಯಾಪ್ತಿಯ ಹಲವು ಕಡೆ ಹಳ್ಳದ ರಭಸತೆ ಹೆಚ್ಚಾಗುವ ಮುನ್ನವೇ ರೈತರು ಹೊಲದಿಂದ ಹೊರಡುವುದರ ಬಗ್ಗೆ ಗ್ರಾಮ ಪಂಚಾಯತಿಗಳಲ್ಲಿ ಜಾಗೃತೆ ಮೂಡಿಸುವುದು ಒಳಿತು. ಇಲ್ಲದಿದ್ದರೇ ಇಂತಹ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.