‘ಜ್ಞಾನ ದೀವಿಗೆ’- ಶಿವಳ್ಳಿ ಸರಕಾರಿ ಪ್ರೌಢಶಾಲೆಗೆ ಸಿಕ್ಕಿದ್ದೇನು: ಗ್ರಾಮಸ್ಥರ ಅಭಿನಂದನೆ

ಧಾರವಾಡ: ಕನ್ನಡ ಮಾಧ್ಯಮ ಲೋಕದ ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಕಾರ್ಯಕ್ರಮವನ್ನ ಆರಂಭಿಸಿ, ಸರಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡಲು ಮುಂದಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೊಡಮಾಡಲಾಯಿತು.
ರೋಟರಿ ಕ್ಲಬ್ ಸಹಯೋಗದಲ್ಲಿ ಆರಂಭಗೊಂಡಿರುವ ಕಾರ್ಯಕ್ರಮದಲ್ಲಿ ಶಿವಳ್ಳಿಯ ಸರಕಾರಿ ಶಾಲೆಗೆ 25 ‘ಟ್ಯಾಬ್’ ಕೊಡುವ ಮೂಲಕ ಚಾಲನೆ ಕೊಡಲಾಯಿತು. ರೋಟರಿ ಕ್ಲಬ್ ನ ನರೇಂದ್ರ, ಡಿಡಿಪಿಐ ಮೋಹನಕುಮಾರ ಹಂಚಾಟೆ ಆಗಮಿಸಿ, ವಿದ್ಯಾರ್ಥಿಗಳಿಗೆ ಟ್ಯಾಬಗಳನ್ನ ವಿತರಣೆ ಮಾಡಿದ್ರು.
ಸರಕಾರಿ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿಗಳಿಗೆ ಕೊಡ ಮಾಡಿದ್ದು, ಇದರಲ್ಲಿ ಹತ್ತನೇ ತರಗತಿಯ ಪಾಠಗಳಿದ್ದು, ಅವುಗಳನ್ನ ವಿವರವಾಗಿ ತಿಳಿಸಲಾಗಿದೆ. ಅಷ್ಟೇ ಅಲ್ಲ, ಯಾವುದೇ ಥರದ ಅಡ್ಡ ಪರಿಣಾಮವಾಗದ ರೀತಿಯಲ್ಲಿ ಟ್ಯಾಬ್ ಲಾಕ್ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿಡಿಪಿಐ ಮೋಹನಕುಮಾರ ಹಂಚಾಟೆ, ಇಂತಹ ಅಭೂತಪೂರ್ವ ಕಾರ್ಯಕ್ರಮ ಆಯೋಜನೆ ನೀಡಿದ್ದು, ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಪ್ರಶಂಸನೀಯ ಎಂದರು. ರೋಟರಿ ಕ್ಲಬ್ ನ ನರೇಂದ್ರ ಕೂಡಾ ಮಾತನಾಡಿ, ಸರಕಾರಿ ಶಾಲೆಗಳ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶವನ್ನ ಹೊಂದಿ, ಇಂತಹ ಕಾರ್ಯವನ್ನ ಆರಂಭಿಸಿದ್ದೇವೆ ಎಂದರು.
ಶಿವಳ್ಳಿ ಗ್ರಾಮದ ಪ್ರೌಢಶಾಲೆಗೆ ಆಗಮಿಸಿ ಟ್ಯಾಬಗಳನ್ನ ಹಂಚಿದ ಪಬ್ಲಿಕ್ ಟಿವಿ ವರದಿಗಾರರು ಹಾಗೂ ಕ್ಯಾಮರಾಮನಗಳಿಗೂ ಹಾಗೂ ರೋಟರಿ ಕ್ಲಬ್ ನ ಪ್ರಮುಖರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಶಾಲಾ ಸಮಿತಿಯ ಉಪಾಧ್ಯಕ್ಷ ಶಿವು ಮುದ್ದಿ, ಮಲ್ಲಿಕಾರ್ಜುನ ಚಿನ್ನಗುಡಿ, ನೇಮಣ್ಣ ಮುಗದ, ಶಿವು ಬೆಳಾರದ, ಟಿಂಕ್ಲಪ್ಪ ಬಿಲ್ಲಿಂಗನವರ, ಕಲ್ಮೇಶ ಮುದ್ದಿ, ಸೇರಿದಂತೆ ಶಾಲೆಯ ಶಿಕ್ಷಕ ಸಮೂಹ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.