ಶಿಕ್ಷಕರ ಪರವಾಗಿ ನಿಂತ ಮಾಜಿ ಶಿಕ್ಷಣ ಮಂತ್ರಿ ಬಸವರಾಜ ಹೊರಟ್ಟಿ
1 min readಹುಬ್ಬಳ್ಳಿ: ಚುನಾವಣಾ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಚುನಾವಣೆ ನಡೆಯುವ ಮುಂಚಿನ ದಿನ ಹಾಗೂ ಚುನಾವಣೆ ನಡೆದ ಮರುದಿನ ರಜೆ ಮಂಜೂರಿ ಮಾಡಬೇಕು ಎಂದು ಶಿಕ್ಷಣ ಖಾತೆ ಮಾಜಿ ಸಚಿವ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ರಾಜ ಮುಖ್ಯ ಚುನಾವಣಾ ಆಯುಕ್ತ ಸಂಜೀವಕುಮಾರ ಅವರಿಗೆ ಹೊರಟ್ಟಿ ಪತ್ರ ಬರೆದಿದ್ದಾರೆ. ಶಿಕ್ಷಕರು ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣಾ ಕರ್ತವ್ಯದ ಮೇಲೆ ಹಾಜರಾದವರಿಗೆ ಚುನಾವಣೆ ನಡೆಯುವ ಮುಂಚಿನ ದಿನ ಮತ್ತು ಚುನಾವಣೆ ಮರುದಿನ ರಜೆ ಮಂಜೂರಿ ಮಾಡಬೇಕು. ಏಕೆಂದರೆ ಶಿಕ್ಷಕರು ಚುನಾವಣಾ ಕೆಲಸಕ್ಕೆ ಬರುವವರು ಬೇರೆ ಬೇರೆ ದೂರದ ಊರುಗಳಿಂದ ಬಂದು ಚುನಾವಣೆ ಕೆಲಸ ಮಾಡಿರುತ್ತಾರೆ. ಮರುದಿನವೇ ಅವರು ಕೆಲಸಕ್ಕೆ ಹಾಜರಾಗಬೇಕಾದರೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಚುನಾವಣೆ ಕೆಲಸ ಸಂಪೂರ್ಣವಾಗಿ ಮುಗಿಯಬೇಕಾದರೆ ತಡರಾತ್ರಿಯಾಗುತ್ತದೆ. ಆಗ ಅವರಿಗೆ ಮನೆಗಳನ್ನು ತಲುಪಲು ವಾಹನ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಅವರು ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಲ್ಲಿ ಕೆಲವೊಂದು ಸಾರಿ ತಹಶೀಲ್ದಾರರ ಕಚೇರಿಯಲ್ಲಿಯೇ ಉಳಿದುಕೊಂಡು ಮರುದಿನ ಬೆಳಿಗ್ಗೆ ಮನೆ ತಲುಪಿರುವ ಉದಾಹರಣೆಗಳಿವೆ. ಈ ರೀತಿ ಮರಳಿ ಕೆಲಸಕ್ಕೆ ಹಾಜರಾಗಲು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ತಾಲೂಕ ಕೇಂದ್ರಗಳಿಂದ ೩೦-೪೦ ಕಿ.ಮೀ. ದೂರದಿಂದ ಬರಬೇಕಾದರೆ ತಡವಾಗಿ ಚುನಾವಣಾ ಕೆಲಸಕ್ಕೆ ಹಾಜರಾಗಿರುವುದಕ್ಕೆ ನೋಟೀಸು ಕೊಟ್ಟಿರುವ ಉದಾಹರಣೆಗಳು ಸಹ ಇವೆ. ಆದ್ದರಿಂದ ಚುನಾವಣೆ ನಡೆದ ಮರುದಿನ ಅವರಿಗೆ ರಜೆ ಮಂಜೂರಿಸಿದರೆ ಉತ್ತಮ ಎಂಬುದಾಗಿ ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿರುವ ಸಂಗತಿ ನಿಜವಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆ ಕೆಲಸ ನಿರ್ವಹಿಸುವ ಶಿಕ್ಷಕರು ಚುನಾವಣೆಯ ಹಿಂದಿನ ದಿನ ಶಾಲೆಯ ಕೆಲಸಕ್ಕೆ ಹೋಗಿ ಬಂದು ಕರ್ತವ್ಯಕ್ಕೆ ಬರುವುದು ಮತ್ತು ಚುನಾವಣೆಯ ಮರುದಿನ ಕೆಲಸಕ್ಕೆ ಹಾಜರಾಗುವುದು ತೊಂದರೆದಾಯಕವಾಗುತ್ತದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆ ಕೆಲಸ ನಿರ್ವಹಿಸುವ ಶಿಕ್ಷಕರಿಗೆ ಚುನಾವಣೆ ನಡೆಯುವ ಮುಂಚಿನ ದಿನ ಹಾಗೂ ಚುನಾವಣೆ ಮರುದಿನ ರಜೆ ಮಂಜೂರಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬಸವರಾಜ ಹೊರಟ್ಟಿ ಕೋರಿದ್ದಾರೆ.