ನಾಳೆ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ
1 min readಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯ ವಿಚಾರಣೆ ನಾಳೆ ಧಾರವಾಡದ ನ್ಯಾಯಾಲಯದಲ್ಲಿ ನಡೆಯಲಿದ್ದು, ಸಿಬಿಐ ತನ್ನ ನಿಲುವನ್ನ ನಾಳೆಗೆ ತಿಳಿಸಬೇಕಿದ್ದು, ನಾಳೆಯ ವಿಚಾರಣೆಯಲ್ಲಿ ಮುಂದೇನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಭಾರತೀಯ ಜನತಾ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆಯಲ್ಲಿ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನಿಗಾಗಿ ಅರ್ಜಿಯನ್ನ ಸಲ್ಲಿಸಲಾಗಿದ್ದು, ಈ ಬಗ್ಗೆ ನವೆಂಬರ್ 18ಕ್ಕೆ ವಿಚಾರಣೆ ನಡೆಯಲಿದೆ.
ಕಳೆದ ಕೆಲವು ದಿನಗಳ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಬಂಧನ ಮಾಡಿದ್ದ ಸಿಬಿಐ, ಮೂರು ದಿನ ತನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಯನ್ನೂ ನಡೆಸಿತ್ತು. ತದನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ, 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿತ್ತು.
ನ್ಯಾಯಾಂಗ ಬಂಧನದ ಅವಧಿ ನವೆಂಬರ್ 23ರ ವರೆಗೆಯಿದೆಯಾದರೂ, ಜಾಮೀನಿಗಾಗಿ ನ್ಯಾಯವಾದಿ ವಿ.ಭರತಕುಮಾರ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಾಳೆಗೆ ನಡೆಯಲಿದೆ. ಈ ಕುರಿತು ಸಿಬಿಐ ತನ್ನ ನಿಲುವನ್ನ ಹೇಳಿ ಮತ್ತೆ ದಿನಾಂಕವನ್ನ ಪಡೆದುಕೊಳ್ಳುತ್ತೋ ಅಥವಾ ಮುಂದಿನ ಯಾವ ನಿರ್ಧಾರಕ್ಕೆ ಬರತ್ತೋ ಎಂಬುದನ್ನ ಕಾದು ನೋಡಬೇಕಿದೆ.