ಹುಬ್ಬಳ್ಳಿ- ಜಗದೀಶ ಶೆಟ್ಟರ ಕ್ಷೇತ್ರದಲ್ಲಿ ತಪ್ಪಿದ ಅನಾಹುತ

ಹುಬ್ಬಳ್ಳಿ: ಮದ್ಯಪ್ರದೇಶದಿಂದ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಹೊರಟಿದ್ದ ಲಾರಿಯೊಂದು ಕೇಶ್ವಾಪುರ ವೃತ್ತದ ಸಮೀಪದಲ್ಲಿ ಆಯತಪ್ಪಿ ರಸ್ತೆ ಪುಟ್‌ಪಾತ್‌ನಲ್ಲಿ ಸಿಲುಕಿ, ವಿದ್ಯುತ್ ಅವಘಡದಿಂದ ಪಾರಾದ ಘಟನೆ ನಡೆದಿದೆ.
ಮದ್ಯಪ್ರದೇಶದ ಭೋಪಾಲದಿಂದ ತರಲಾಗುತ್ತಿದ್ದ ಕಬ್ಬಿಣದ ಪರಿಕರಗಳು ತಾರಿಹಾಳ ಕೈಗಾರಿಕಾ ಪ್ರದೇಶವನ್ನ ತಲುಪಬೇಕಾಗಿತ್ತು. ಇನ್ನೂ ಆರೇಳು ಕಿಲೋಮೀಟರ್ ಅಂತರದಲ್ಲಿ ಈ ಅವಘಡ ಸಂಭವಿಸಿದ್ದರಿಂದ, ಲಾರಿಯು ಸೇರಿದಂತೆ ಲಾರಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿಯ ಮೇಲ್ಬಾಗವೇ ವಿದ್ಯುತ್ ತಂತಿ ಇರುವುದರಿಂದ ಲಾರಿಯನ್ನ ಹೊರಗೆ ತೆಗೆಯಲು ಪರಿಶ್ರಮ ಪಡಲಾಗುತ್ತಿದೆ. ಹುಬ್ಬಳ್ಳಿ ಸಂಚಾರಿ ಠಾಣೆ ಪೊಲೀಸರು, ಸ್ಥಳಕ್ಕೆ ದೌಡಾಯಿಸಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.
ಕೇಶ್ವಾಪುರದಲ್ಲಿ ನಿರ್ಮಾಣಗೊಂಡ ಕಳಫೆ ಕಾಮಗಾರಿಯೇ ಇಂತಹ ಅವಘಡಕ್ಕೆ ಕಾರಣವಾಗಿದ್ದು, ಕೆಲವೇ ಗಜಗಳ ಅಂತರದಿಂದ ಅವಘಡ ತಪ್ಪಿದಂತಾಗಿದೆ.