ಸ್ಮಾರ್ಟ್ ಸಿಟಿ ಬಗ್ಗೆ ಇರುವ ತಪ್ಪು ಅಭಿಪ್ರಾಯ ದೂರ ಮಾಡಿ: ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ: ಉಸ್ತುವಾರಿ ಕಾರ್ಯದರ್ಶಿ ಹೇಳಿಕೆ
1 min readಹುಬ್ಬಳ್ಳಿ: ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಅವರಲ್ಲಿರುವ ತಪ್ಪು ಅಭಿಪ್ರಾಯಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಯೋಜನೆಯಡಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಮಾಧ್ಯಮಗಳ ಮುಖಾಂತರ ಪ್ರಚಾರಕೈಗೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರವಿಕುಮಾರ್ ಸುರಪುರ ಹೇಳಿದರು.
ಹುಬ್ಬಳ್ಳಿ ಐ.ಟಿ ಪಾರ್ಕ್ ನ ಕೆಯುಐಡಿಎಫ್ ಸಿ ಬೋರ್ಡ್ ರೂಂ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಟೆಂಡರ್ ಕರೆದು ಕಾರ್ಯಾದೇಶ ನೀಡಿದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಈಗಾಗಲೇ ಉದ್ಘಾಟನೆಯಾಗಿ ಸಾರ್ವಜನಿಕರಿಗೆ ಬಳಕೆಯಾಗುತ್ತಿರುವ ಯೋಜನೆಗಳ ಸ್ಥಳದಲ್ಲಿ ಸ್ಮಾರ್ಟ್ ಸಿಟಿ ಲಾಂಛನ ಹಾಗೂ ಕಾಮಗಾರಿಗೆ ವೆಚ್ಚದ ಬಗ್ಗೆ ಮಾಹಿತಿ ಫಲಕ ಅಳವಡಿಸಿ. ಎಲ್ಲಾ ವಿವರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಒದಗಿಸಬೇಕು. ಕಾಮಗಾರಿ ವಿಳಂಬ ಮಾಡುವ ಕಂಟ್ರಾಕ್ಟರ್ ಗಳಿಗೆ ನೋಟಿಸ್ ನೀಡಿ, ಯೋಜನೆಯಡಿ ಅಭಿವೃದ್ಧಿ ಪಡಿಸುತ್ತಿರುವ ಎಲ್ಲಾ ರಸ್ತೆಗಳನ್ನು ಡಿಸೆಂಬರ್ ಅಂತ್ಯದ ವೇಳೆ ಪೂರ್ಣಗೊಳಿಸಿ. ಘನ ತಾಜ್ಯ ವಿಲೇವಾರಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು.ಮನೆಗಳಲ್ಲಿ, ಅಪಾರ್ಟ್ ಮೆಂಟ್ ಗಳಲ್ಲಿ ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸಬೇಕು. ಇಂಟಿಗ್ರೇಟೆಡ್ ಕಾಮಾಂಡಿಗ್ ಸೆಂಟರ್ ಹೆಚ್ಚು ಕ್ರಿಯಾಶೀಲವಾಗಬೇಕು. ಇದಕ್ಕೆ ತಗುಲಿರುವ 45 ಕೋಟಿ ರೂ. ವೆಚ್ಚ ಸಾರ್ಥಕವಾಗಬೇಕು.
ಆದಷ್ಟು ಬೇಗ ಮಹಾನಗರಪಾಲಿಕೆ, ಹೆಸ್ಕಾಂ, ಅಗ್ನಿಶಾಮಕ, ಆಂಬ್ಯುಲೆನ್ಸ್ , ಬಿ.ಆರ್.ಟಿ.ಎಸ್. ಹೀಗೆ ಎಲ್ಲಾ ವಿಭಾಗಗಳ ಕಮ್ಯಾಂಡಿಂಗ್ ಅಲ್ಲಿ ನೆರವೇರಬೇಕು. ಸ್ಮಾರ್ಟ್ ಸಿಟಿ ಯೋಜನೆ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಧಿಕಾರಿಗಳು, ಇಂಜಿನಿಯರುಗಳು ಕಾಮಗಾರಿಯ ಸ್ಥಳಗಳಿಗೆ ತೆರಳಿ ಗುಣಮಟ್ಟ ಪರಿಶೀಲಿಸಬೇಕು ಎಂದರು.
ಸುಗಮ ಸಂಚಾರಕ್ಕೆ ಯೋಜನೆ ರೂಪಿಸಿ
ಅವಳಿ ನಗರದ ರಸ್ತೆಗಳಲ್ಲಿ, ಮಾರ್ಗದರ್ಶನ ನೀಡುವ ಸೈನ್ ಬೋರ್ಡುಗಳಿಲ್ಲ. ಟ್ರಾಫಿಕ್ ಸಿಗ್ನಲ್ ಗಳ ಕಾರ್ಯಕ್ಷಮತೆ ಹೆಚ್ಚಬೇಕು. ಸಂಚಾರಿ ವೃತ್ತಗಳಲ್ಲಿ ಜಿಬ್ರಾ ಕ್ರಾಸಿಂಗ್ ಪಟ್ಟಿಗಳಿರಬೇಕು. ಹುಬ್ಬಳ್ಳಿ ಧಾರವಾಡ ಅವಳಿನಗರಗಳು ಉತ್ತರ ಕರ್ನಾಟಕದ ವಾಣಿಜ್ಯ ನಗರಗಳಾಗಿವೆ. ಮುಂದಿನ ಹಲವು ವರ್ಷಗಳನ್ನು ಯೋಚಿಸಿ ರಸ್ತೆಗಳ ಅಗಲೀಕರಣ ಕೈಗೊಳ್ಳಿ. ಮುಂದಿನ ಸಭೆಯ ವೇಳೆ , ಅವಳಿ ನಗರದ ಸಂಚಾರ ವ್ಯವಸ್ಥೆಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ
ಅವಳಿ ನಗರದಲ್ಲಿ ಜನ ನಿಬಿಡ ಪ್ರದೇಶದಲ್ಲಿ ಬಹಳಷ್ಟು ಜನ ಮಾಸ್ಕ್ ಧರಿಸಿದೇ ಓಡಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಪಾಲಿಕೆ, ಪೊಲೀಸ್ ಇಲಾಖೆಯವರು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ. ಪಾಲಿಕೆ ವತಿಯಿಂದ ಮಾರ್ಷಲ್ ಗಳನ್ನು ನೇಮಕ ಮಾಡಿ ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ಹುಬ್ಬಳ್ಳಿ ಧಾರವಾಡ ರಾಜ್ಯಕ್ಕೆ ಪ್ರಥಮ
ಕರ್ನಾಟಕ ಏಳು ನಗರಗಳಲ್ಲಿ ಸ್ಮಾರ್ಟ್ ಯೋಜನೆ ಅನುಷ್ಠಾನವಾಗುತ್ತಿದೆ. ಈ ನಗರಗಳ ಪೈಕಿ ಹುಬ್ಬಳ್ಳಿ ಧಾರವಾಡ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯ ದೇಶದಲ್ಲಿ ಐದನೇ ಸ್ಥಾನದಲ್ಲಿದೆ. ಅವಳಿ ನಗರದಲ್ಲಿ ಒಟ್ಟು 80 ಕೋಟಿ ವೆಚ್ಚದ ಹೊಸ ಯೋಜನೆಗಳು, ವಿಸ್ತೃತ ಯೋಜನಾ ವರದಿ ಹಂತದಿಂದ ಟೆಂಡರ್ ಹಂತಕ್ಕೆ ಬಂದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ.
ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಸೇರಿದಂತೆ ಹೆಸ್ಕಾಂ, ಸಂಚಾರಿ ಪೊಲೀಸ್, ಕುಡಿಯುವ ನೀರು ಹಾಗೂ ನೈರ್ಮಲ್ಯ ಮಂಡಳಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.