ವಿಠ್ಠಲಾ.. ರಂಗಾ.. ವಿಠ್ಠಲ ವಿಠ್ಠಲಾ…!
1 min readಧಾರವಾಡ: ಭಾರತ ಬಂದ್ ಇರುವ ದಿನವನ್ನೇ ಕಳ್ಳತನಕ್ಕೆ ಬಳಕೆ ಮಾಡಿಕೊಂಡಿರುವ ಚೋರರು ಬೈಕಿನಲ್ಲಿ ಬಂದು ದೇವಸ್ಥಾನದಲ್ಲಿ ಹುಂಡಿಯನ್ನ ತೆಗೆದುಕೊಂಡು ಹೋಗಿ, ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾದ ಘಟನೆ ಧಾರವಾಡ ನಗರದ ಮದಿಹಾಳ ಬಡಾವಣೆಯಲ್ಲಿರುವ ದೇವಸ್ಥಾನವೊಂದರಲ್ಲಿ ನಡೆದಿದೆ.
ಧಾರವಾಡದ ಮದಿಹಾಳ ಬಡಾವಣೆಯಲ್ಲಿರುವ ವಿಠ್ಠಲ ದೇವಸ್ಥಾನ ಹುಂಡಿಗೆ ಭಕ್ತರು ಹಾಕಿದ ಕಾಣಿಕೆಗಳನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ಹುಂಡಿಯಲ್ಲಿದ್ದ ಲಕ್ಷಾಂತರ ನಗದು ತೆಗೆದುಕೊಂಡು ಖಾಲಿ ಹುಂಡಿಯನ್ನು ಮದಿಹಾಳ ಹೊರವಲಯದಲ್ಲಿ ಕಳ್ಳರು ಬೀಸಾಕಿ ಹೋಗಿದ್ದಾರೆ. ದೇವಸ್ಥಾನದಿಂದ ಹುಂಡಿ ತೆಗೆದುಕೊಂಡು ಹೋಗುವ ದೃಶ್ಯ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿಯಲ್ಲಿ ಕಂಡಿರುವ ಪ್ರಕಾರ ದೇವಸ್ಥಾನದ ಹುಂಡಿಯನ್ನ ಬೈಕಿನಲ್ಲಿ ಇಬ್ಬರು ತೆಗೆದುಕೊಂಡು ಹೋಗಿದ್ದಾರೆ. ಹಿಂದೆ ಕುಳಿತವನೇ ಹುಂಡಿಯನ್ನ ಗಟ್ಟಿಯಾಗಿ ಹಿಡಿದುಕೊಂಡು ವೇಗವಾಗಿ ಬೈಕ್ ನ್ನ ಚಲಾಯಿಸುತ್ತ, ಮದಿಹಾಳ ಪ್ರದೇಶದಿಂದ ಕಾಣೆಯಾಗಿದ್ದಾರೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಕೆಲವು ಕಡೆ ಸಿಸಿಟಿವಿ ದೃಶ್ಯಗಳು ಇರಬಹುದೆಂದು ತಪಾಸಣೆ ಮಾಡಲಾಗುತ್ತಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.