ಮತ್ತೋರ್ವ ಗ್ರಾಮ ಪಂಚಾಯತಿ ಅಭ್ಯರ್ಥಿ ಸಾವು
ದಾವಣಗೆರೆ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಭ್ಯರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಚ್ಚ ಹಸಿರಿರುವಾಗಲೇ, ಮತ್ತೋರ್ವ ಗ್ರಾಮ ಪಂಚಾಯತಿ ಸದಸ್ಯ ಹೃದಯಾಘಾತದಿಂದ ಸಾವಿಗೀಡಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ.
78 ವರ್ಷದ ಡಿ.ಬಸಪ್ಪ ಮೃತಪಟ್ಟ ಅಭ್ಯರ್ಥಿಯಾಗಿದ್ದು, ಪ್ರಸ್ತುತ ಚುನಾವಣೆಗೆ ಅರಬಗಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂಕದಕಟ್ಟೆ ಸಾಮಾನ್ಯ ಮೀಸಲಾತಿಯಡಿಯಲ್ಲಿ ಸ್ಪರ್ಧೆ ಮಾಡಿದ್ದರು. ಮಂಗಳವಾರ ನಡೆದ ಮತದಾನದ ವೇಳೆಯಲ್ಲಿ ಎಲ್ಲರೊಂದಿಗೂ ಲವಲವಿಕೆಯಿಂದ ಇದ್ದವರು, ರಾತ್ರಿಯಾದ ಮೇಲೆ ಎದೆ ನೋವು ಕಾಣಿಸಿಕೊಂಡು ಇನ್ನಿಲ್ಲವಾಗಿದ್ದಾರೆ.
ಮೃತ ಡಿ.ಬಸಪ್ಪ ಅವರು ಈಗಾಗಲೇ ಐದು ಬಾರಿ ಗೆದ್ದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರರಿದ್ದಾರೆ. ಇವರ ಕಾರ್ಯವೈಖರಿಯಿಂದ ಎಲ್ಲರೂ ಇವರನ್ನ ಬಸಣ್ಣಾ ಎಂದೇ ಕರೆಯುತ್ತಿದ್ದರು.
ಈ ಚುನಾವಣೆಯಲ್ಲೂ ಇವರ ಗೆಲವು ನಿಶ್ಚಿತ ಎನ್ನುತ್ತಿದ್ದಾರೆ ಗ್ರಾಮಸ್ಥರು. ಆಕಸ್ಮಿಕವಾಗಿ ಇವರೇ ಗೆದ್ದರೇ, ಈ ಗ್ರಾಮದಲ್ಲಿ ಮತ್ತೆ ಚುನಾವಣೆ ನಡೆಯಲಿದೆ.