ಹಳ್ಳೂರ-ಚಿಂಚೋರೆ ಮಕ್ಕಳಿಗೆ ಟಿಕೆಟ್: ಕೆಲವು ಮುಖಂಡರ ಪತ್ನಿಯರ ಕೈಗೆ “ಹಸ್ತ”…!

ಬೆಂಗಳೂರು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಕಲಿಗಳು ತಮ್ಮದೇ ಆದ ರೀತಿಯಲ್ಲಿ ಕೌಟುಂಬಿಕ ರಾಜಕೀಯ ಮುಂದುವರೆಸಿಕೊಂಡು ಹೋಗುತ್ತಿದ್ದು, ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಸ್ಥಳೀಯ ಮುಖಂಡರು ತಮ್ಮ ಮಕ್ಕಳನ್ನ, ಪತ್ನಿಯರನ್ನ ಚುನಾವಣಾ ಅಖಾಡಕ್ಕೀಳಿಸಲು ಸನ್ನದ್ಧರಾಗಿ ಅಧಿಕೃತ ಅಭ್ಯರ್ಥಿಯನ್ನಾಗಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ತಮ್ಮ ಪುತ್ರ ಮಹ್ಮದ ಹಳ್ಳೂರಗೆ ಕಾಂಗ್ರೆಸ್ ಮುಖಂಡ ಗಣೇಶ ಟಗರಗುಂಟಿಯವರಿಗೆ ಟಿಕೆಟ್ ತಪ್ಪಿಸಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೀಪಕ ಚಿಂಚೋರೆಯವರು ತಮ್ಮ ಮಗ ಅನಿರುದ್ಧ ಚಿಂಚೋರೆಗೆ ಟಿಕೆಟ್ ಪಡೆಯುವಲ್ಲಿ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ರಜತ ಉಳ್ಳಾಗಡ್ಡಿಮಠ ವಿರುದ್ಧ ತಿರುಗಿ ಬಿದ್ದಿದ್ದ ಪಿ.ಕೆ.ರಾಯನಗೌಡರು ತಮ್ಮ ಮಗ ಶಿವಕುಮಾರಗೆ ಟಿಕೆಟ್ ಪಡೆದಿದ್ದಾರೆ.

ಕಾಂಗ್ರೆಸ್ ಮುಖಂಡರಾದ ದಾನಪ್ಪ ಕಬ್ಬೇರ ಅವರು ಕವಿತಾ ದಾನಪ್ಪ ಕಬ್ಬೇರ ಅವರಿಗೆ, ಮೋಹನ ಹಿರೇಮನಿ ಮಂಗಳಾ ಹಿರೇಮನಿಯವರಿಗೆ ಹಸ್ತದ ಟಿಕೆಟ್ ಪಡೆದಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಬಷೀರ ಗೂಡಮಾಲಾ, ಕೌಸರಭಾನು ಗೂಡಮಾಲಾರಿಗೆ ಟಿಕೆಟ್ ತೆಗೆದುಕೊಂಡಿದ್ದಾರೆ. ದಶರಥ ವಾಲಿಯವರು ಶೋಭಾ ವಾಲಿಯವರಿಗೆ, ಅಲ್ತಾಫ ಕಿತ್ತೂರವರು ಸಾಯಿರಾಭಾನು ಕಿತ್ತೂರುರವರಿಗೆ ಹಸ್ತದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿಗಳಲ್ಲಿ ಪ್ರಕಾಶ ಕ್ಯಾರಕಟ್ಟಿ, ಪ್ರಕಾಶ ಘಾಟಗೆ ಪ್ರಮುಖರಾಗಿ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಮುಖರು ಟಿಕೆಟ್ ಪಡೆಯದ ಹಾಗೇ ಪಕ್ಷದಲ್ಲಿನ ಕೆಲವರು ನೋಡಿಕೊಂಡಿದ್ದಾರೆ.