ಸೋಮವಾರದಿಂದ ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಅನಲಾಕ್: ಯಾವ್ಯಾವ ಜಿಲ್ಲೆಗಳಲ್ಲಿ ಗೊತ್ತಾ…

ಬೆಂಗಳೂರು: ಜೂನ್ 21ರಿಂದ 16 ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಗೊಳಿಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ 16 ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದ್ದು, 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸುತ್ತಿರುವುದಾಗಿ ತಿಳಿಸಿದರು.
ಬೆಳಗಾವಿ, ಉತ್ತರ ಕನ್ನಡ, ಬೆಂಗಳೂರು ನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ರಾಯಚೂರು, ಬಾಗಲಕೋಟೆ, ಮಂಡ್ಯ, ರಾಮನಗರ, ತುಮಕೂರು, ಗದಗ, ಕಲಬುರ್ಗಿ, ಹಾವೇರಿ, ಯಾದಗಿರಿ, ಬೀದರ್, ಕೋಲಾರ ಸೇರಿದಂತೆ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದ್ದು, ಬೆಳಿಗ್ಗೆ 6ಗಂಟೆಯಿಂದ ಸಂಜೆ 5ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಮೈಸೂರಿನಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿಇಟಿರೇಟ್ ಇದ್ದು, ಈಗಿರುವ ಕಠಿಣ ಕ್ರಮ ಮುಂದುವರೆಯಲಿದೆ. ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ವಿಜಯಪುರ ಸೇರಿದಂತೆ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.
• ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿ.ಬಿ.ಎಂ.ಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ಈ ಕೆಳಕಂಡ ಸಡಿಲಿಕೆಗಳನ್ನು ನೀಡಲಾಗಿದೆ.
• ಎಲ್ಲಾ ಅಂಗಡಿಗಳನ್ನು ಸಂಜೆ 5.00 ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗುವುದು.
• ಎಸಿ. ಚಾಲನೆಗೊಳಿಸದೇ ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗುವುದು.
• ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
• ಬಸ್ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿದೆ.
• ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ.
• ಸರ್ಕಾರಿ/ಖಾಸಗಿ ಕಛೇರಿಗಳಿಗೆ ಶೇ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ.
• ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.
• ಜಿಮ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.
• ಶೇ 5 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ದಿನಾಂಕ: 11-06-2021 ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.
• ಶೇ. 10 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರೆಯುವುದು.
ರಾಜ್ಯವ್ಯಾಪಿ ಅನ್ವಯವಾಗುವಂತೆ:
• ಪ್ರತಿ ದಿನ ನೈಟ್ ಕರ್ಫ್ಯೂ ರಾತ್ರಿ 07.00 ಗಂಟೆಯಿಂದ ಬೆಳಗ್ಗೆ 05 ಗಂಟೆವರೆಗೆ ಇರುತ್ತದೆ.
• ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 07.00 ಗಂಟೆಯಿಂದ ಸೋಮವಾರ ಬೆಳಿಗ್ಗ 05.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
• ಬಸ್ ಸಂಚಾರವು ಶೇ. 50 ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿಸಿದೆ.