ಮಿಲ್ಟ್ರಿ ಸೆಲೆಕ್ಷನ್ನಿಗೆ ಹೋಗಿದ್ದ 19 ಯುವಕರ ಸ್ಥಿತಿ ಗಂಭೀರ….!
1 min readಯಲ್ಲಾಪೂರ: ಸೇನೆ ಸೇರಬೇಕೆಂಬ ಬಯಕೆಯಿಂದ ಬಾಗಲಕೋಟೆಯಿಂದ ದೂರದ ಉಡುಪಿಗೆ ಹೋಗಿ ಮರಳಿ ಬರುವಾಗ ಕ್ರೂಸರ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಸೇನೆಗೆ ಹೋಗಿದ್ದ 19 ಯುವಕರು ಸೇರಿದಂತೆ 25 ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾದ ಘಟನೆ ತಾಲೂಕಿನ ಕೋಳಿಕೇರಿ ಬಳಿ ಸಂಭವಿಸಿದೆ.
ಬಾಗಲಕೋಟೆಯ ರಾಜು, ನರೇಶ ಸೇರಿದಂತೆ ಹಲವರು ಉಡುಪಿಯಲ್ಲಿ ನಡೆದ ಸೇನಾ ಭರ್ತಿಗೆ ತೆರಳಿದ್ದರು. ಅಲ್ಲಿನ ಪ್ರಕ್ರಿಯೆ ಮುಗಿಸಿಕೊಂಡು ಮರಳಿ ತಮ್ಮೂರಿನತ್ತ ಬರುವಾಗ ಕ್ರೂಸರಗಳ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಉಪಚರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನೆ ಮಾಡಲಾಗಿದೆ.
ಘಟನೆಯಲ್ಲಿ ಹಲವರ ಕೈ ಕಾಲುಗಳು ಮುರಿದಿದ್ದು, ಬಹುತೇಕರು ತೀವ್ರವಾದ ರಕ್ತಸ್ರಾವವಾಗಿದೆ. ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕೆಲವರ ಸ್ಥಿತಿ ತೀರಾ ಗಂಭೀರವಾಗಿದೆ.
ಸೇನೆ ಸೇರುವ ಕನಸು ಹೊತ್ತವರ ಈ ಸ್ಥಿತಿಯನ್ನು ನೋಡಿ ಎಲ್ಲರೂ ಮರುಗುವಂತಾಗಿದೆ.