ಜೂನ್ ಮೊದಲ ವಾರದಲ್ಲಿ ಶಾಲೆಗಳ ಆರಂಭ: ಡೌಟ್ ಎಂದ ಸಚಿವ ಸುರೇಶಕುಮಾರ

ಬೆಂಗಳೂರು: ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬಹುದು, ಎಷ್ಟು ಶೈಕ್ಷಣಿಕ ದಿನಗಳು ಕಡಿಮೆ ಆಗುತ್ತದೆ ಎಂಬ ಬಗ್ಗೆ ಶಿಕ್ಷಣ ಇಲಾಖೆ ಅಧ್ಯಯನ ಮಾಡ್ತಿದೆ. ತರಗತಿಗಳನ್ನು ಶಿಫ್ಟ್ ನಲ್ಲಿ ನಡೆಸಬೇಕಾ ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕಾ ಎಂಬ ಚರ್ಚೆಯೂ ನಡೆಯುತ್ತಿದೆ. ಸೋಮವಾರ ವೇಳೆಗೆ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದರು.
ಸೋಮವಾರದೊಳಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಕೂಡಾ ಬಂದಿರುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ವೇಳೆ ಮಕ್ಕಳ ಹಿತ ಕೂಡಾ ಕಾಪಾಡಬೇಕಾಗುತ್ತದೆ. ಮಕ್ಕಳಿಗೆ ತಮ್ಮ ಮನೆ ಪಕ್ಕದಲ್ಲೇ ಇರುವ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚೆಯೂ ನಡೆಯುತ್ತಿದೆ. ಸೋಮವಾರ ಚರ್ಚೆ ಮಾಡಿ ಪರೀಕ್ಷಾ ವೇಳಾಪಟ್ಟಿ ಕೊಡುವ ಸಾಧ್ಯತೆಯೂ ಇದೆ. ಎಲ್ ಕೆಜಿ, ಯುಕೆಜಿ, ಪ್ರಾಥಮಿಕ ಶಾಲೆಗಳನ್ನು ಯಾವಾಗ ಆರಂಭ ಮಾಡಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಈ ಹಿಂದೆ ಇದ್ದ ರೀತಿ ಜೂನ್ 1 ಕ್ಕೆ ಶಾಲೆ ಪುನಾರಂಭ ಸಾಧ್ಯತೆ ಕಡಿಮೆ. ಈ ವರ್ಷ ಯಾವುದೇ ಶಾಲೆಗಳು ಶುಲ್ಕದಲ್ಲಿ ಹೆಚ್ಚಳ ಮಾಡದಂತೆ ಸೂಚಿಸಿದ್ದೇವೆ, ಸಾಧ್ಯವಾದರೆ ಕಡಿಮೆ ಮಾಡಿ ಅಂತಾ ಹೇಳಿದ್ದೇವೆ. ಎಲ್ ಕೆಜಿ, ಯುಕೆಜಿ ಮಕ್ಕಳಿಗೂ ಆನ್ ಲೈನ್ ಟೀಚಿಂಗ್ ಸರಿಯಲ್ಲ. ಇದು ಹಾಸ್ಯಾಸ್ಪದ ಸಂಗತಿ. ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಅನ್ ಲೈನ್ ಟೀಚಿಂಗ್ ಕ್ರೂರ ವ್ಯವಸ್ಥೆ, ಹಿಂಸೆ. ಇದರ ಬಗ್ಗೆ ಅಧ್ಯಯನ ಮಾಡುವಂತೆ ಇಲಾಖೆ ಆಯುಕ್ತರಿಗೆ ಸೂಚಿಸಿದ್ದೇನೆ. ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನೂ ನಾವು ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.