ಮಂತ್ರಿ ಸ್ಥಾನ ನಾನೂ ಕೇಳೋದಿಲ್ಲ: ಮುರುಗೇಶ ನಿರಾಣಿ
ಮೈಸೂರು: ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಮಂತ್ರಿ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಮಂತ್ರಿ ಸ್ಥಾನ ಕೊಡಿ ಎಂದು ಕೇಳುವುದೂ ಇಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಮುರುಗೇಶ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಮುರುಗೇಶ ನಿರಾಣಿ, ಪಕ್ಷ ಜವಾಬ್ದಾರಿ ಕೊಟ್ಟರೆ ಮಂಡ್ಯ ಜಿಲ್ಲೆಯಲ್ಲೂ ರಾಜಕಾರಣ ಮಾಡುವೆ. ಆದರೆ ಪಾಂಡವಪುರ ಸಕ್ಕರೆ ಕಾರ್ಖಾನೆಗೂ, ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಮಂಡ್ಯ ಜಿಲ್ಲೆಗೆ ಉದ್ಯಮಿಯಾಗಿ ಎಂಟ್ರಿ ಕೊಟ್ಟಿದ್ದೇನೆ. ಸಕ್ಕರೆ ಕಾರ್ಖಾನೆಯನ್ನು ಯಶಸ್ವಿಯಾಗಿ ನಡೆಸಿ ತೋರಿಸುತ್ತೇನೆ. ಜೊತೆಗೆ ಪಕ್ಷ ರಾಜಕೀಯವಾಗಿ ಯಾವುದೇ ಜವಾಬ್ದಾರಿ ಕೊಟ್ಟರೆ ಮಾಡಲು ನಾನು ಸಿದ್ಧ ಎಂದರು.
ಪಾಂಡವಪುರ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಮುಂದಾಗಿದ್ದೇನೆ. ಆಗಸ್ಟ್ 1 ರಿಂದ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಲಾಗುವುದು. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು. ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಕಬ್ಬು ಆ ಭಾಗದ ರೈತರ ಜೀವಾಳವಾಗಿದೆ. ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಿ, ಮಾದರಿ ಸಕ್ಕರೆ ಕಾರ್ಖಾನೆಯನ್ನಾಗಿ ಮಾಡುತ್ತೇನೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.