ಉದ್ಯಮಿಯ ಹೃದಯಭಾಗಕ್ಕೆ ಗುಂಡು: ದುಷ್ಕರ್ಮಿಗಳು ಪರಾರಿ
ಕಲಬುರಗಿ: ಮನೆಯಲ್ಲಿದ್ದ ಉದ್ಯಮಿಯ ಎದೆಯ ಭಾಗಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಗೋದುತಾಯಿ ನಗರದಲ್ಲಿ ಸಂಭವಿಸಿದ್ದು, ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.
ಟೈಲ್ಸ್ ವ್ಯಾಪಾರಿಯಾಗಿರುವ ರಾಜಸ್ಥಾನ ಮೂಲದ ಸುನೀಲ ರಂಕಾ ಎಂಬಾತನೇ ಹತ್ಯೆಗೀಡಾಗಿದ್ದು, ವ್ಯಾಪಾರ ವಹಿವಾಟು ಮುಗಿಸಿಕೊಂಡು ಮನೆಗೆ ಬಂದ ನಂತರ ಕೊಲೆ ಮಾಡಲಾಗಿದೆ.
ಗೋದುತಾಯಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ರಂಕಾಗೆ, ಮನೆ ಬಳಿಯೇ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಉದ್ಯಮಿಯನ್ನ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಕರಣ ಅಶೋಕನಗರ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳ ಜಾಡು ಹಿಡಿಯುವ ಪ್ರಯತ್ನ ನಡೆದಿದೆ.