ಬೈಕ್ ವ್ಹೀಲಿಂಗ್: ಜೀವ ಕಳೆದುಕೊಂಡ ಮೂವರು ಯುವಕರು
ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಎದುರಿಗೆ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆ ಯಲಹಂಕದ ಜಿಕೆವಿಕೆ ಬಳಿ ಸಂಭವಿಸಿದೆ.
ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಎದುರಿಗೆ ಬಂದ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನ ಮಹಮ್ಮದ್ ಆದಿ ಆಯಾನ್, ಮಾಜ್ ಅಹಮ್ಮದ್ ಖಾನ್ ಮತ್ತು ಸಯ್ಯದ್ ರಿಯಾಜ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ನಾಗವಾರ ಸಮೀಪದ ಗೋವಿಂದಪುರ ನಿವಾಸಿಗಳೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ಮರರ್ಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ಪೊಲೀಸರು ಈಗಾಗಲೇ ಸಾಕಷ್ಟು ಕಠಿಣ ಕ್ರಮಗಳನ್ನ ಕೈಗೊಂಡಿದ್ದರೂ ಕೂಡ ವ್ಹೀಲಿಂಗ್ ಮಾಡುವವರ ಹಾವಳಿ ಕಡಿಮೆಯಾಗದೇ ಇರುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ.