ಮಗಳೊಂದಿಗೆ ಕೆರೆಗೆ ಹಾರವಾದ ತಾಯಿ: ಕಣ್ಣೀರಾದ ಊರಿಗೂರು
1 min read
ಹಾವೇರಿ: ಮಗಳು ಮದುವೆಯ ವಯಸ್ಸಾದರೂ ಗಂಡ ಸುಧಾರಿಸುತ್ತಿಲ್ಲ ಎಂದುಕೊಂಡ ಮಹಿಳೆಯೋರ್ವಳು ಮದುವೆ ವಯಸ್ಸಿಗೆ ಬಂದ ಮಗಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ದುರ್ಗಾದೇವಿ ಕೆರೆಯಲ್ಲಿ ಸಂಭವಿಸಿದೆ.
ಮೃತರಿಬ್ಬರು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಯಾಳ ತಾಂಡಾದ ನಿವಾಸಿಗಳಾಗಿದ್ದು, 40ವರ್ಷದ ತಾಯಿ ಶಿವಕ್ಕ ಹಾಗೂ 20 ವರ್ಷದ ಮಗಳು ಸಂಗೀತಾ ಎಂದು ಗುರುತಿಸಲಾಗಿದೆ.
ಶಿವಕ್ಕ ತನ್ನ ಮಗಳೊಂದಿಗೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರೇ, ಪತಿ ಕುಡಿದು ಬಂದು ಗಲಾಟೆ ಮಾಡಿಕೊಳ್ಳುತ್ತಿದ್ದ. ಇದನ್ನ ನಿಯಂತ್ರಣ ಮಾಡಲಾಗದೇ, ಬೇಸರದಿಂದ ಇಂತಹ ನಿರ್ಧಾರ ತೆಗೆದುಕೊಂಡಿರಬಹುದೆಂದು ಶಂಕಿಸಲಾಗಿದೆ.
ಕೆರೆಯಲ್ಲಿದ್ದ ಮೃತ ದೇಹಗಳನ್ನ ಸ್ಥಳೀಯರ ಸಹಾಯದಿಂದ ಹೊರಗೆ ತೆಗೆಯಲಾಗಿದೆ. ಮೃತರ ಸಂಬಂಧಿಕರ ಕಣ್ಣೀರು ಕೋಡಿಯಾಗಿ ಹರಿಯುವಂತಾಗಿದೆ. ಮಗಳ ಭವಿಷ್ಯ ಉಜ್ವಲವಾಗಲಿ ಎಂದು ಕನಸು ಕಂಡ ತಾಯಿ, ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿರುವುದು ದುರಂತವೇ ಸರಿ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.