ವಿನಯ ಕುಲಕರ್ಣಿ ಬಂಧನ- ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ
1 min read
ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಜಿಲ್ಲಾ ಪಂಚಾಯತಿಯ ಬಿಜೆಪಿ ಸದಸ್ಯನಾಗಿದ್ದ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಪ್ರತಿಭಟನೆ ಆರಂಭಗೊಂಡಿದೆ.
ಬೆಳ್ಳಂಬೆಳಿಗ್ಗೆಯೇ ಇಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ವಶಕ್ಕೆ ಪಡೆದು ಧಾರವಾಡದ ಉಪನಗರ ಠಾಣೆಯಲ್ಲಿ ವಿಚಾರಣೆಯನ್ನ ಮಾಡುತ್ತಿದ್ದು, ಜಿಲ್ಲೆಯ ಕಲಘಟಗಿ ಹಾಗೂ ನವಲಗುಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದೆ.
ನವಲಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯನ್ನ ಬಂದ್ ಮಾಡಿ, ಉದ್ದೇಶಪೂರ್ವಕವಾಗಿ ವಶಕ್ಕೆ ಪಡೆಯಲಾಗಿದೆ ಎಂದು ದೂರಿದರು.
ನವಲಗುಂದ ಪಟ್ಟಣದಲ್ಲಿ ಮಾಜಿ ಸಚಿವ ಕೆ.ಎನ್. ಗಡ್ಡಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಸಾಧುಗೌಡ ಪಾಟೀಲ್, ಬಸವಾರಾಜ್ ಶಲವಡಿ, ಉಸ್ಮಾನ್ ಬಬರ್ಚಿ, ಶಿವಾನಂದ ತಡಸಿ, ಈರಣ್ಣ ಶಿಡಗಂಟಿ, ಬಡೇಸಾಬ್ ದೇವರಿಡು, ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ, ನಾಗರಾಜ್ ಭಜಂತ್ರಿ, ರುದ್ರಗೌಡ ಸರ್ನಾಡಗೌಡರ್, ಅಶೋಕ್ ಮರಕುಂಬಿ, ಹನಮಂತಪ್ಪ ಚಿಕ್ಕಣ್ಣವರ, ಬಸವರಾಜ್ ನರಗುಂದ, ತಾಪಂ ಸದಸ್ಯ ಶಿವಾನಂದ ಚಲವಾದಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಲಘಟಗಿ ಪಟ್ಟಣದಲ್ಲಿ ಕೂಡಾ ಪ್ರತಿಭಟನೆ ನಡೆಯಿತು. ರಸ್ತೆ ಮಧ್ಯದಲ್ಲಿ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದರು. ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮರಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ, ಮಾಜಿ ಸಚಿವ ಸಂತೋಷ್ ಲಾಡ್ ಅವರ ಕಾರ್ಯದರ್ಶಿ ಹರೀಶ್ ಶಂಕರಮಠದ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಂಕರಗಿರಿ ಭಾವನವರ, ಮಹೇಶ್ ಅಲಗೂರು, ಗುರು ಬೆಂಗೇರಿ, ಗಿರೀಶ್ ಸೂರ್ಯವಂಶಿ, ಬಸವರಾಜ್ ಕಾಮಧೇನು ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.