ನಾಳೆಯಿಂದ ನಾ ಕೆಲಸಕ್ಕೆ ಬರಲ್ಲ: ಶಾಲೀಗಿ ಹೊಕ್ಕೇನಿ ಎಂದ ವಿದ್ಯಾರ್ಥಿ ಮರಳಿ ಬಾರದ ಲೋಕಕ್ಕೆ..
1 min read
ಹುಬ್ಬಳ್ಳಿ: ಸರಕಾರಿ ಶಾಲೆಗಳಲ್ಲಿ ನಾಳೆಯಿಂದ ವಿದ್ಯಾಗಮ ಕಾರ್ಯಕ್ರಮ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಕೆಲಸಕ್ಕೆ ಬರೋದಿಲ್ಲವೆಂದು ಹೇಳಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿಯೋರ್ವ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ ನಡೆದಿದೆ.
ಪ್ರಶಾಂತ ಬಂಡಿವಡ್ಡರ ಎಂಬ ವಿದ್ಯಾರ್ಥಿಯೇ ಸಾವಿಗೀಡಾಗಿದ್ದು, ತಮ್ಮದೇ ಗ್ರಾಮದ ಮಂಜುನಾಥ ಹಾನಗಲ್ ಎಂಬುವವರ ಮನೆ ಕಾಮಗಾರಿ ನಡೆಯುತ್ತಿದ್ದ ವೇಳೆಯಲ್ಲಿ ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾನೆ.
8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಶಾಂತ ಬಂಡಿವಡ್ಡರ, ವಿದ್ಯಾಗಮ ಕಾರ್ಯಕ್ರಮ ಬಂದ್ ಆದ ನಂತರ ಗ್ರಾಮದಲ್ಲಿ ದಿನಗೂಲಿ ಕೆಲಸ ಮಾಡಲು ಹೋಗುತ್ತಿದ್ದ. ಶಾಲೆಗಳು ಆರಂಭವಾಗುತ್ತಿವೆ ಎಂದು ತಿಳಿದುಕೊಂಡು, ಮನೆಯಲ್ಲಿ ಮೊದಲೇ ಕಂಡಿಷನ್ ಮಾಡಿ, ನಾಳೆಯಿಂದ ನಾನು ಬರೋಲ್ಲ ಎಂದೇ ಕೆಲಸಕ್ಕೆ ಹೋಗಿದ್ದನಂತೆ.
ವಿಧಿಯಾಟದಿಂದ ಪ್ರಶಾಂತ ಇನ್ನಿಲ್ಲವಾಗಿದ್ದಾನೆ. ಆತನ ಅಕ್ಷರ ದಾಹ ಆತನಲ್ಲೇ ಕರಗಿ ಹೋಗಿದೆ. ವಿದ್ಯಾಗಮದ ಹೊಸ ಕನವರಿಕೆಗೆ ಆತನೇ ಇಲ್ಲವಾಗಿದ್ದಾನೆ. ಘಟನೆಯ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.