ಉಚಿತ ಕಾನೂನು ಸೇವೆಯನ್ನು ಪಡೆದುಕೊಳ್ಳಿ: ಜಿಲ್ಲಾ ನ್ಯಾಯಾಧೀಶ ಹೆಚ್.ಸಿ. ಶಾಮ್ ಪ್ರಸಾದ್
1 min read
ಹುಬ್ಬಳ್ಳಿ: ತಾಲೂಕು ಕಾನೂನು ಸೇವಾ ಸಮಿತಿಯಿಂದ ಮಹಿಳೆಯರು ಹಾಗೂ ದುರ್ಬಲ ವರ್ಗದವರಿಗೆ ನೀಡಲಾಗುವ ಉಚಿತ ಕಾನೂನು ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶ ಹಾಗೂ ಪ್ರಧಾನ ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷಾಧಿಕಾರಿ ಹೆಚ್.ಸಿ. ಶಾಮ್ ಪ್ರಸಾದ್ ಹೇಳಿದರು.
ನೂತನ ನ್ಯಾಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು – ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು ಸೇವಾ ಸಮಿತಿಗಳು ಜನಸಾಮಾನ್ಯರ ಬಾಗಿಲಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಲಾಗುತ್ತಿವೆ. ದೌರ್ಜನ್ಯ ತುತ್ತಾಗಿ ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ದುರ್ಬಲ ಜನರಿಗೆ ಆಸರೆಯಾಗಿ ನ್ಯಾಯ ದೊರಕಿಸುವಲ್ಲಿ ಸಕ್ರಿಯವಾಗಿವೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಇದ್ದು ಜನರು ಇವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜೆ.ಎಂ.ಎಫ್.ಸಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನಾಗರಾಜಪ್ಪ.ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ 2019-20 ನೇ ಸಾಲಿನಲ್ಲಿ 30 ಕ್ಕೂ ಹೆಚ್ಚು ಜನರಿಗೆ ಉಚಿತ ಕಾನೂನು ನೆರವನ್ನು ನೀಡಲಾಗಿದೆ. ಕಾನೂನು ಸಾಕ್ಷರತಾ ರಥದಂತಹ ಕಾರ್ಯಕ್ರಮ ಆಯೋಜಿಸಿ ಕಾನೂನು ಅರಿವು ಮೂಡಿಸಲಾಗಿದೆ. ರಾಷ್ಟ್ರೀಯ ಯುವದಿನ, ಮತದಾರರ ದಿನ, ಜಾಗತಿಕ ಮಹಿಳೆಯರ ದಿನ, ಹಿರಿಯ ನಾಗರಿಕ ದಿನಾಚರಣೆ, ಕೊರೋನಾ ಜಾಗೃತಿ ಸೇರಿದಂತೆ 35 ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನ್ಯಾಯಾಲಯ, ತಹಶಿಲ್ದಾರ ಕಚೇರಿ, ಕಿಮ್ಸ್ ಎ.ಆರ್.ಟಿ ಸೆಂಟರ್, ಸಿಡಿಪಿಓ, ಸಬ್ ಜೈಲ್ ಗಳಲ್ಲಿ ಲೀಗಲ್ ಏಡ್ ಕ್ಲಿನಿಕ್ ತುಂಬಾ ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಲೋಕ ಅದಾಲತ್ ನ್ಯಾಯಾಧೀಶರು ಹಾಗು ವಕೀಲರು ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ 3030 ಕ್ಕೂ ಹೆಚ್ಚು ಪ್ರಕರಣಗಳು ಲೋಕ ಅದಾಲತ್ ನಲ್ಲಿ ರಾಜಿಯಾಗಿವೆ. ಧಾರವಾಡ ಜಿಲ್ಲೆಗೆ ಕರ್ನಾಟಕದಲ್ಲಿ ಅತ್ಯುತ್ತಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಂಬ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 1 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ದೇವಿಂದ್ರಪ್ಪ ಎನ್ ಬಿರಾದಾರ, ಜಿಲ್ಲಾ ನ್ಯಾಯಾಧೀಶ ಹಾಗೂ ಕೌಟುಂಬಿಕ ನ್ಯಾಯಾಲಯ ಪ್ರಧಾನ ನ್ಯಾಯಾಧೀಶೆ ಸುಮಂಗಲಾ ಎಸ್ ಬಸವಣ್ಣೂರ, ಜಿಲ್ಲಾ ನ್ಯಾಯಾಧೀಶರು ಹಾಗೂ ಔದ್ಯಮಿಕ ನ್ಯಾಯಾಧೀಕರಣ ಅಧ್ಯಕ್ಷಾಧಿಕಾರಿ ಜಿ.ಎ. ಮೂಲಿಮನಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಗಂಗಾಧರ ಕೆ.ಎನ್., ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಾದೇಶ್ .ವಿ ವಕೀಲರ ಸಂಘದ ಅಧ್ಯಕ್ಷ ಅಶೋಕ ವಿ ಬಳಿಗಾರ, ಪ್ರಧಾನ ಕಾರ್ಯದರ್ಶಿ ಗುರು ಎಫ್ ಹಿರೇಮಠ ಉಪಸ್ಥಿತರಿದ್ದರು.