ಧಾರವಾಡ ಅರಣ್ಯಾಧಿಕಾರಿಗಳ ದಾಳಿ-5ಲಕ್ಷ ಮೌಲ್ಯದ ಶ್ರೀಗಂಧ ವಶ: ಮೂವರ ಬಂಧನ
1 min read
ಧಾರವಾಡ: ಸತ್ತೂರ ಸಂರಕ್ಷಿತ ಅರಣ್ಯದ ಸಂಜೀವಿ ಪಾರ್ಕ ಹಾಗೂ ಧಾರವಾಡ ಶಹರ ವಿವಿಧೆಡೆ ಶ್ರೀಗಂಧದ ಮರಗಳನ್ನ ಕದ್ದು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಖದೀಮರನ್ನ ಬಂಧನ ಮಾಡುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಹುಬ್ಬಳ್ಳಿ ತಾಲೂಕಿನ ರಾಯನಾಳ ದೇವರಗುಡಿಹಾಳದ ಮೆಹಬೂಬಸಾಬ ಹಸನಸಾಬ ಸವಣೂರ, ಕಲಘಟಗಿ ತಾಲೂಕಿನ ಶಿಗಿಗಟ್ಟಿ ಗ್ರಾಮದ ಕೃಷ್ಣಪ್ಪ ತಿಪ್ಪಣ್ಣ ಲಮಾಣಿ ಹಾಗೂ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ಅರ್ಜುನ ದೇವೇಂದ್ರ ಮಾಚಕ ಎಂದು ಗುರುತಿಸಲಾಗಿದೆ.
ಆರೋಪಿಗಳು ಶ್ರೀಗಂಧದ ಮರಗಳನ್ನ ಕಡಿದು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದರು. 71ಕೆಜಿಯಷ್ಟು ಶ್ರೀಗಂಧವನ್ನ ವಶಕ್ಕೆ ಪಡೆಯಲಾಗಿದ್ದು, ಅಂದಾಜು ಮೌಲ್ಯ ಐದು ಲಕ್ಷ ರೂಪಾಯಿಗಳಷ್ಟೆಂದು ಹೇಳಲಾಗಿದೆ. ಇದರ ಜೊತೆಗೆ ತೂಕ ಮಾಡುವ ಕಬ್ಬಿಣದ ತೂಕ ಮಾಡುವ ಕಲ್ಲುಗಳು, ಹಾಗೂ ಎರಡು ಬೈಕುಗಳನ್ನ ವಶಕ್ಕೆ ಪಡೆದಿದ್ದಾರೆ.
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಆರ್.ಎಸ್.ಉಪ್ಪಾರ ಸೇರಿದಂತೆ ಹಲವರು ಭಾಗವಹಿಸಿ ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.