Posts Slider

Karnataka Voice

Latest Kannada News

ಪ.ಪಂ ಸದಸ್ಯನೋರ್ವ ಪತ್ರಕರ್ತನಾಗಿದ್ದು ಹೇಗೆ: ಹಾರನಹಳ್ಳಿ ರಾಮಸ್ವಾಮಿಯವರು ಚಾ ಕುಡಿಯಲು ಗಾಡಿ ನಿಲ್ಲಿಸದಿದ್ದರೇ..!

1 min read
Spread the love

ಜೀತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನ ಕಲಘಟಗಿಯ ಪ್ರಭಾಕರ ನಾಯಕ ಪಡೆದುಕೊಂಡಿದ್ದಾರೆ. ಉದಯವಾಣಿಯಲ್ಲಿ ಪ್ರಕಟಗೊಂಡ ತುಮರಿಕೊಪ್ಪ ಗ್ರಾಮಸ್ಥರ ಜಲಬೇನೆ ವರದಿಗೆ ಜಿಲ್ಲಾ ಪ್ರಶಸ್ತಿ ಲಭಿಸಿದೆ.

ಧಾರವಾಡ: ಅವತ್ತು ಹಾರನಹಳ್ಳಿ ರಾಮಸ್ವಾಮಿಯವರು ಕಲಘಟಗಿಯ ಗಜಾನನ ಹೊಟೇಲ್ ಬಳಿ ಕಾರು ನಿಲ್ಲಿಸಿ ಚಹಾ ತರಿಸಿಕೊಳ್ಳದೇ ಇದ್ದಿದ್ದರೇ, ಪತ್ರಕರ್ತ ಪ್ರಭಾಕರ ನಾಯಕ, ಕೇವಲ ಎಸ್.ಟಿ.ಡಿ ನಾಯಕ ಆಗಿಯೇ ಉಳಿದುಬಿಡುತ್ತಿದ್ದರು, ಮಾಜಿ ರಾಜಕಾರಣಿ..

ಹೌದು.. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುತ್ತಿರುವ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಯ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿರುವ ಪ್ರಭಾಕರ ವೆಂಕಟರಮನ ನಾಯಕ, ನಡೆದು ಬಂದ ದಾರಿಯೇ ಸೋಜಿಗ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಭಾಕರ ನಾಯಕ, ಪತ್ನಿ ಶಾಂತಲಾರಿಗೆ ಸಿಕ್ಕ ನೌಕರಿಯಿಂದ ಕಲಘಟಗಿಗೆ ಬಂದವರು. ಅದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷದ ಮುಖಂಡ ಮತ್ತೂ ಪಟ್ಟಣ ಪಂಚಾಯತಿಯ ಸದಸ್ಯ. ಯಲ್ಲಾಪುರ ಬಿಟ್ಟ ದಿನವೇ  ರಾಜಕಾರಣ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಬಂದವರು.

ಮಡದಿ ಫಾದರ್ ಜಾಕೋಬರ ಗುಡ್ ನ್ಯೂಸ್ ಕಾಲೇಜಿನಲ್ಲಿ 250 ರೂಪಾಯಿ ಸಂಬಳ ಪಡೆಯುತ್ತಿದ್ದರೇ, ಇವರೊಂದು ಎಸ್.ಟಿ.ಡಿಯಿಟ್ಟುಕೊಂಡು ಬದುಕು ಆರಂಭಿಸಿದ್ದರು. ಹಾಗೇ ಎಸ್ಟಿಡಿ ನಡೆಸುತ್ತಿದ್ದಾಗಲೇ ಸಂಯುಕ್ತ ಕರ್ನಾಟಕದ ಹಾರನಹಳ್ಳಿ ರಾಮಸ್ವಾಮಿಯವರು, ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಹೊರಟಾಗ ಕಲಘಟಗಿಯ ಗಜಾನನ ಹೊಟೇಲ್ ಬಳಿ ಚಹಾ ಕುಡಿಯಲು ಅಂಬಾಸಡರ್ ಕಾರನ್ನ ನಿಲ್ಲಿಸಿದ್ದರು. ಪಕ್ಕದಲ್ಲಿಯೇ ಎಸ್ಟಿಡಿ ನಡೆಸುತ್ತಿದ್ದ ನಾಯಕರು, ರಾಮಸ್ವಾಮಿಯವರನ್ನ ಮಾತನಾಡಿಸುತ್ತಿದ್ದಾಗಲೇ, ನೀನು ಪತ್ರಿಕೆಯಲ್ಲಿ ಕೆಲಸ ಮಾಡು. ಅಷ್ಟೇ ಅಲ್ಲ, ಪತ್ರಿಕೆಯ ಪ್ರಸಾರ ಸಂಖ್ಯೆ ಹೆಚ್ಚಿಗೆ ಮಾಡಬೇಕೆಂದು ಹೇಳಿ ಹೊರಟಿದ್ದರು. ಬದುಕು ಮಾಧ್ಯಮದತ್ತ ಹೊರಳಿತ್ತು.

ಅಂದಿನಿಂದ ಇಂದಿನವರೆಗೆ ಬರೋಬ್ಬರಿ 25 ವರ್ಷದಿಂದ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಪ್ರಭಾಕರ ನಾಯಕ, ನಡುವೆ ಚೂರು ತೊಂದರೆಯಾದಾಗ ಉದಯವಾಣಿ ಪತ್ರಿಕೆಗೂ ಬರೆಯತೊಡಗಿದರು. ಬಹುತೇಕ ಎರಡು ಪತ್ರಿಕೆಯ ವರದಿಗಾರರಾಗಿ ಯಾವುದೇ ತಾಲೂಕಿನಲ್ಲಿ ಒಬ್ಬರೇ ಕಾರ್ಯನಿರ್ವಹಿಸುವುದಿಲ್ಲ. ಪ್ರಭಾಕರ ನಾಯಕರು ಇದಕ್ಕೆ ಅಪವಾದವೆಂಬಂತೆ ಎರಡು ಪತ್ರಿಕೆಗಳಿಗೂ ಅವರದ್ದೇ ಹೆಸರಿನಲ್ಲಿ ಬರೆಯುತ್ತಾರೆ.

ಪತ್ನಿ ಶಾಂತಲಾ ಅವರು ಈಗಲೂ ಅದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಬರುವ ಜೂನದಲ್ಲಿ ನಿವೃತ್ತಿಯಾಗಲಿದ್ದಾರೆ. ಹಲವು ಬಾರಿ ಪ್ರಾಂಶುಪಾಲರಾಗುವ ಅವಕಾಶ ಬಂದರೂ, ನಾನು ಬಂದಿರೋದು ಕಲಿಸೋದಕ್ಕೆ ಎನ್ನುತ್ತಲೇ ಪ್ರಾಂಶುಪಾಲರ ಹುದ್ದೆಯನ್ನ ಕೈಬಿಟ್ಟಿದ್ದಾರೆ ಪ್ರಭಾಕರ ನಾಯಕರ ಪತ್ನಿ ಶಾಂತಲಾ.

ಪ್ರಭಾಕರ ನಾಯಕರ ಪುತ್ರಿ ಮಂಜುಶಾ ಬಿಇ ಮುಗಿಸಿ ಬೆಂಗಳೂರಿನಲ್ಲಿ ಇಂಟರನ್ಯಾಷನಲ್ ಕಂಪನಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮಗ ಅನಿಷಕುಮಾರ ನೇವಿಯಲ್ಲಿ ಆಯ್ಕೆಯಾಗಿದ್ದಾರೆ.

ಯಲ್ಲಾಪುರದ ರಾಜಕಾರಣಿ ಪ್ರಭಾಕರ ನಾಯಕ, ಕಲಘಟಗಿಗೆ ಬಂದು ‘ಎಸ್.ಟಿ.ಡಿ ನಾಯಕ’ರಾಗಿ ನಂತರ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿ, ನಡುವೆ ಕೈಹಿಡಿದ ಉದಯವಾಣಿ ಪತ್ರಿಕೆಯ ಮೂಲಕ ಪ್ರಶಸ್ತಿಯನ್ನ ಪಡೆಯುತ್ತಿದ್ದಾರೆ. ಉದಯವಾಣಿಯಲ್ಲಿ ಪ್ರಕಟಗೊಂಡ ತುಮರಿಕೊಪ್ಪ ಗ್ರಾಮಸ್ಥರ ಜಲಬೇನೆ ವರದಿಗೆ ಜಿಲ್ಲಾ ಪ್ರಶಸ್ತಿ ಲಭಿಸಿದೆ.


Spread the love

Leave a Reply

Your email address will not be published. Required fields are marked *