Posts Slider

Karnataka Voice

Latest Kannada News

ಸಾರಿಗೆ ಬಸ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ವಾರಸುದಾರರಿಗೆ ಪರಿಹಾರ ವಿತರಣೆ

1 min read
Spread the love

ಹುಬ್ಬಳ್ಳಿ:  ಸಾರಿಗೆ ಬಸ್ ಅಪಘಾತದಲ್ಲಿ ಮೃತಪಟ್ಟ ವಕ್ತಿಯ ವಾರಸುದಾರರಿಗೆ  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ನೀಡಲಾಗುವ 35 ಸಾವಿರ ರೂ. ಗಳ ಅಪಘಾತ ಪರಿಹಾರವನ್ನು ಹುಬ್ಬಳ್ಳಿ ವಿಭಾಗೀಯ ಕಚೇರಿಯಲ್ಲಿ ಮೃತರ ಪತ್ನಿಗೆ ವಿತರಿಸಲಾಯಿತು.

ವಾಕರಸಾಸಂಸ್ಥೆ ಹುಬ್ಬಳ್ಳಿ ವಿಭಾಗದ ಗ್ರಾಮಂತರ 2ನೇ ಘಟಕದ  ಕೆಎ 25 ಎಫ್ 2836 ಸಂಖ್ಯೆಯ ಸಾರಿಗೆ ಬಸ್ಸು ಕಳೆದ ವರ್ಷ ಮಾರ್ಚ್ 20 ರಂದು ಕಲಘಟಗಿಯಿಂದ ಹುಬ್ಬಳ್ಳಿಗೆ ಬರುತ್ತಿರುವಾಗ ಮಿಶ್ರಿಕೋಟಿ ಕ್ರಾಸ್ ಹತ್ತಿರ  ಪಾದಚಾರಿ ಒಬ್ಬರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ(47) ಬಿನ್ ಸಣ್ಣರಂಗಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಸಾರಿಗೆ ಬಸ್ ಅಪಘಾತದಲ್ಲಿ ಮೃತಪಟ್ಟ ಬಸ್ ಪ್ರಯಾಣಿಕರಲ್ಲದವರು ಅಂದರೆ, ಪಾದಚಾರಿಗಳು, ಸೈಕಲ್ ಸವಾರರು ಮತ್ತು ಇತರೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಮೃತರ ವಾರಸುದಾರರಿಗೆ ಸಂಸ್ಥೆಯ ವತಿಯಿಂದ 50 ಸಾವಿರ ರೂ.ಗಳ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಅಪಘಾತದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಲ್ಲಿ ಅವರ ವಾರಸುದಾರರಿಗೆ 3ಲಕ್ಷ ರೂ.ಗಳ ಅಪಘಾತ ಪರಿಹಾರವನ್ನು ನೀಡಲಾಗುತ್ತದೆ.

ಈ ಪ್ರಕರಣದಲ್ಲಿ ಮೃತರು ಪಾದಚಾರಿಯಾಗಿದ್ದರು. ಅವರ ವಾರಸುದಾರರಾದ ಪತ್ನಿ ಶ್ರೀದೇವಿ ತಿಪ್ಪೇಸ್ವಾಮಿ ರವರಿಗೆ ಈ ಮೊದಲು 15 ಸಾವಿರ ರೂ. ತುರ್ತು ಪರಿಹಾರಧನ ನೀಡಲಾಗಿತ್ತು. ಈಗ  ಇನ್ನುಳಿದ 35 ಸಾವಿರ ರೂ.ಗಳನ್ನು ವಿತರಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಸುರಕ್ಷತೆಗೆ ಹಲವು ಕ್ರಮ; ಅಪಘಾತ ಪ್ರಮಾಣದಲ್ಲಿ ಇಳಿಕೆ ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಬಸ್ಸುಗಳ ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ಚಾಲಕರಿಗೆ ನಿಯಮಿತವಾಗಿ ತರಬೇತಿ ನೀಡಲಾಗುತ್ತದೆ.ಅಪಘಾತ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿನೀಡಿ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ  ಮಾಡಿ ಅಗತ್ಯ ಕ್ರಮ ವಹಿಸುತ್ತಾರೆ. ಇದರಿಂದಾಗಿ ಅಪಘಾತಗಳ ಪ್ರಮಾಣ  ಕಡಿಮೆಯಾಗಿದೆ.

2018-19ರಲ್ಲಿ 14 ಮರಣಾಂತಿಕ, 12 ಗಂಭೀರ ಹಾಗೂ 31 ಸಣ್ಣ ಪುಟ್ಟ ಅಪಘಾತಗಳು ಸೇರಿದಂತೆ ಒಟ್ಟು 57 ಅಪಘಾತಗಳು ಸಂಭವಿಸಿದ್ದವು. 2019-20 ರಲ್ಲಿ 17 ಮರಣಾಂತಿಕ,8 ಗಂಭೀರ ಹಾಗೂ27 ಸಣ್ಣ ಪುಟ್ಟ ಅಪಘಾತಗಳು ಸೇರಿದಂತೆ ಒಟ್ಟು 52 ಅಪಘಾತಗಳು ಸಂಭವಿಸಿದ್ದವು. 2020-21 ರಲ್ಲಿ ಏಪ್ರಿಲ್ ನಿಂದ ಸಪ್ಟೆಂಬರ್ ಅಂತ್ಯದ ವರೆಗೆ ಕೇವಲ 1 ಮರಣಾಂತಿಕ ಹಾಗೂ 4 ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುತ್ತವೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಇತರೆ ಅಧಿಕಾರಿಗಳಾದ ದೊಡ್ಡಲಿಂಗಣ್ಣನವರ, ಸುನಿಲ ವಾಡೆಕರ್, ರೋಹಿಣಿ ಹಾಗೂ ಸಂಚಾರ ಅಧೀಕ್ಷಕ ಐ.ಜಿ.ಮಾಗಾಮಿ ಇದ್ದರು.


Spread the love

Leave a Reply

Your email address will not be published. Required fields are marked *