ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಕೊಡಲ್ವಂತೆ: 8ನೇ ತರಗತಿ ವಿದ್ಯಾರ್ಥಿಗಳಿಗೆ ನಿರಾಸೆ
1 min read
ಬೆಂಗಳೂರು: ರಾಜ್ಯ ಸರ್ಕಾರವು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತ ಸೈಕಲ್ ವಿತರಣೆ ನಿಲ್ಲಿಸುವ ಮೂಲಕ ನಿರಾಸೆ ಮೂಡಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಅನುದಾನದ ಕೊರತೆಯಿಂದಾಗಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷ ಬೈಸಿಕಲ್ ವಿತರಣೆಯನ್ನು ಸ್ಥಗಿತಗೊಳಿಸಿದೆ.
ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ ಸೈಕಲ್ ವಿತರಣೆ ಮಾಡದಂತೆ ಸೂಚನೆಯನ್ನು ನೀಡಿದೆ. 2008 ರಲ್ಲಿ ಆರಂಭಗೊಂಡ ಈ ಯೋಜನೆಯು 12 ವರ್ಷಗಳಲ್ಲಿ ಇದೆ ಮೊದಲ ಬಾರಿ ಸ್ಥಗಿತಗೊಳಿಸಲಾಗಿದೆ. 2019-20 ರಲ್ಲಿ 2,44,901 ಬಾಲಕಿಯರಿಗೆ 2,59,624 ಬಾಲಕರಿಗೆ ಸೈಕಲ್ ವಿತರಣೆ ಮಾಡಲಾಗಿತ್ತು.
ಅನುದಾನದ ಕೊರತೆಯಿಂದಾಗಿ ಸೈಕಲ್ ನೀಡುತ್ತಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಶೂ ಹಾಗೂ ಸಾಕ್ಸ್, ಪಠ್ಯಪುಸ್ತಕಗಳ ಖರೀದಿ ಪೂರ್ಣಗೊಂಡಿದ್ದು, 2021 ರ ಜನವರಿ ಮೊದಲ ವಾರದಿಂದ ವಿತರಣೆ ಮಾಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅನುದಾನದ ಕೊರತೆಯ ನೆಪವೊಡ್ಡಿ ಸೈಕಲ್ ವಿತರಣೆ ನಿಲ್ಲಿಸಿದ್ದು ಸರಿಯಲ್ಲ. ಇತರೆ ಕೆಲಸ ಮಾಡುವುದಕ್ಕೆ ಅನುದಾನ ಇರುತ್ತದೆ. ವಿದ್ಯಾರ್ಥಿಗಳಿಗೆ, ಶಿಕ್ಷಣದ ಕೆಲಸಕ್ಕೆ ಅನುದಾನ ಇಲ್ಲ ಎಂದು ಹೇಳುತ್ತಿರುವುದು ಸರಕಾರದ ನಿರ್ಲಕ್ಷ ಹಾಗೂ ಶಿಕ್ಷಣ ವಿರೋಧಿ ಕ್ರಮವಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.
ನಮ್ಮೂರಿನಲ್ಲಿ ಏಳನೆಯ ತರಗತಿವರೆಗೆ ಮಾತ್ರ ಇದೆ. ನಾನು ಹೈಸ್ಕೂಲ್ ಶಿಕ್ಷಣಕ್ಕಾಗಿ 3 ಕಿ.ಮಿ ದೂರದ ಗೆದಗೇರಿ ಗ್ರಾಮಕ್ಕೆ ಹೋಗಬೇಕಿದೆ. ಸೈಕಲ್ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದೆ. ಸರಕಾರ ಈ ವರ್ಷ ಸೈಕಲ್ ವಿತರಣೆ ಇಲ್ಲ ಎಂದು ಹೇಳಿದ್ದರಿಂದ ನಡೆದುಕೊಂಡು ಶಾಲೆಗೆ ಹೋಗಬೇಕು ಎಂದು ತಲ್ಲೂರಿನ 8 ನೇ ತರಗತಿ ವಿದ್ಯಾರ್ಥಿನಿ ಕಮಲಮ್ಮ ನಿರಾಸೆ ವ್ಯಕ್ತಪಡಿಸಿದ್ದಾರೆ.