ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಧ್ವನಿಯಾಗುವೆ: ಎಸ್.ವಿ. ಸಂಕನೂರ
1 min read
ಧಾರವಾಡ: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ವರ್ಗಾವಣೆಯಂತಹ ಸಮಸ್ಯೆಗಳಿಂದ ತುಂಬಾ ನೊಂದಿದ್ದಾರೆ. ವರ್ಗಾವಣೆ ಸಮಸ್ಯೆ ಸೇರಿದಂತೆ ಸಿ ಆರ್ ಆರ್ ರೂಲ್ ಬಗ್ಗೆ ಮತ್ತು ಮುಖ್ಯೋಪಾಧ್ಯಾಯರ ಸಮಸ್ಯೆ ಗ್ರಾಮೀಣ ಶಿಕ್ಷಕರ ಪರಿಹಾರ ಭತ್ಯೆ ಸೇರಿದಂತೆ ಈ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಧ್ವನಿಯಾಗಿ ನಿಲ್ಲುವೆ. ಜೊತೆಗೆ ಬಡಜನರ ಶಿಕ್ಷಕರ ಮಕ್ಕಳ ಕಲ್ಯಾಣಕ್ಕಾಗಿ ಯಾವುದೇ ಇಲಾಖೆಯಲ್ಲಿ ಸಮಸ್ಯೆ ಇರಲಿ ಖುದ್ದು ಬೇಟಿ ಮಾಡಿ ಸಮಸ್ಯೆ ಪರಿಹಾರಕ್ಕಾಗಿ ಹಗಲಿರುಳು ತನುಮನ ಧನದಿಂದ ಸೇವೆ ಸಲ್ಲಿಸುವೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಭರವಸೆ ನೀಡಿದರು.
ಧಾರವಾಡದ ಕೊಪ್ಪದಕೇರಿಯಲ್ಲಿರುವ ಶಿಕ್ಷಕ ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತು ಮತ್ತು ಪರಿಷತ್ತಿನ ಅಡಿಯಲ್ಲಿ ಬರುವ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರ್ನಾಟಕ ರಾಜ್ಯ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಆರಂಭದಲ್ಲಿ ಸನ್ಮಾನ ಸ್ವೀಕರಿಸಿ ಸಂಕನೂರ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತ್ಯೇಕ ವಿಧಾನ ಪರಿಷತ್ ಸದಸ್ಯರಿಲ್ಲ ಎಂಬ ಕೊರಗು ತಮಗೆ ಮೂಡುವುದು ಬೇಡ ನಾನು ನಿಮ್ಮ ವಿಧಾನ ಪರಿಷತ್ ಸದಸ್ಯ ಎಂಬುದನ್ನು ತಾವು ಒಪ್ಪಿಕೊಳ್ಳಬೇಕು ಎಂದರು.
ಅಭಿನಂದನ ನುಡಿಯಲ್ಲಿ ಮಾತನಾಡಿದ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಸಜ್ಜನ ಮಾತನಾಡಿ, ಎಸ್.ವಿ. ಸಂಕನೂರ ಮುತ್ಸದ್ದಿಗಳು ಸಮಾಜಮುಖಿ ಚಿಂತಕರು, ಬಡವರ ಬಗ್ಗೆ ಅಪಾರ ಕಾಳಜಿ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದ್ದಾರೆ. ಶಿಕ್ಷಕರ ಜ್ಬಲಂತ ಸಮಸ್ಯೆಗಳಿಗೆ ಹಂತಹಂತವಾಗಿ ಪರಿಹಾರ ಮಾಡಬೇಕು ಜೊತೆಗೆ ವರ್ಗಾವಣೆ ಸಮಸ್ಯೆಗೆ ಇತಿಶ್ರಿ ಹಾಡಲು ಯೋಜನೆ ರೂಪಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷ ಗುರು ತಿಗಡಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಎಸ್.ವಿ. ಸಂಕನೂರ ಅರ್ಥೈಸಿಕೊಂಡಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಅದರಲ್ಲಿಯೂ ಪದವೀಧರ ಶಿಕ್ಷಕರ ಸಮಸ್ಯೆ, ಮುಖ್ಯೋಪಾಧ್ಯಾಯರ ಸಮಸ್ಯೆ ಜೊತೆಗೆ ನೌಕರರ ಮರಣ ಶಾಸನದಂತಿರುವ ಎನ್.ಪಿ.ಎಸ್ ಹೋಗಲಾಡಿಸಿ ಹಳೆಯ ಪಿಂಚಣಿ ಸೌಲಭ್ಯ ಕೊಡಿಸಲು ನಿರಂತರ ಶ್ರಮದ ಜೊತೆಗೆ ಸದಾ ಸ್ಪಂದಿಸಬೇಕು ಎಂದರು.
ಆನಂದ ಕುಲಕರ್ಣಿ ಮಲ್ಲಿಕಾರ್ಜುನ ಚಿಕ್ಕಮಠ, ಎ.ಬಿ.ಚೆನ್ನವೀರಗೌಡರ, ಎಲ್.ಐ.ಲಕ್ಕಮ್ಮನವರ, ನಾರಾಯಣ ಭಜಂತ್ರಿ, ರಾಜು ಮಾಳವಾಡ, ಶಂಕರ ಘಟ್ಟಿ, ಕಾಶಪ್ಪ ದೊಡವಾಡ, ಆರ್.ಬಿ. ಮುಂಗೋಡಿ, ಗೋವಿಂದ ಜುಜಾರೆ, ಡಿ.ಟಿ.ಬಂಡಿವಡ್ಡರ ಸೇರಿದಂತೆ ಅನೇಕ ಶಿಕ್ಷಕರ ಸಂಘಗಳ ಪ್ರಮುಖರು ಹಾಜರಿದ್ದರು. ಕಾರ್ಯಕ್ರಮದಲ್ಲಿ ನಾರಾಯಣ ಭಜಂತ್ರಿ, ಸುರೇಶ ಪಾಟೀಲ, ಅಕ್ಬರಲಿ ಸೋಲಾಪುರ, ಬಸವರೆಡ್ಡಿ ಮಾಡೊಳ್ಳಿ, ಉದಯ ಮೊರಬ, ಶಿಕ್ಷಕರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಶಹಪುರ, ಗೀತಾ ದೊಡಮನಿ ಮುಂತಾದವರಿಗೆ ಸತ್ಕರಿಸಲಾಯಿತು. ಶಂಕರ ಘಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾಶಪ್ಪ ದೊಡವಾಡ ಸ್ವಾಗತಿಸಿದರು, ಚಂದ್ರಶೇಖರ್ ತಿಗಡಿ ವಂದಿಸಿದರು.