ಹುಬ್ಬಳ್ಳಿಯಲ್ಲೇ ಭೀಕರ ರಸ್ತೆ ಅಪಘಾತ: ವಿದ್ಯಾರ್ಥಿ ದುರ್ಮರಣ
1 min read
ಹುಬ್ಬಳ್ಳಿ: ಸ್ಕೂಟಿಯಲ್ಲಿ ಪೇಪರ್ ಹಾಗೂ ಉಪಹಾರ ತರಲು ಹೊರಗಡೆ ಹೋಗಿದ್ದ ವಿದ್ಯಾರ್ಥಿಯೋರ್ವನ ಮೇಲೆ ಈರುಳ್ಳಿ ತುಂಬಿದ ಲಾರಿ ಹಾಯ್ದು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಮುಂಭಾಗದಲ್ಲಿ ಸಂಭವಿಸಿದೆ.
ಮಧ್ಯಪ್ರದೇಶದಿಂದ ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋಗುವಾಗ ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ಮೃತಪಟ್ಟವನನ್ನ ಹುಬ್ಬಳ್ಳಿ ಕೇಶ್ವಾಪುರದ 17 ವರ್ಷದ ಜುನೈದ ಶೇಕ್ ಎಂದು ಗುರುತಿಸಲಾಗಿದ್ದು, ತಲೆಯ ಮೇಲೆಯೇ ಲಾರಿ ಹಾಯ್ದು ಹೋಗಿದ್ದರಿಂದ ಮುಖ ಗುರುತು ಸಿಗದಂತೆ ಛಿದ್ರವಾಗಿದೆ.
ಘಟನೆ ನಡೆದ ತಕ್ಷಣವೇ ಲಾರಿಯನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿರುವ ಚಾಲಕನ ಹುಡುಕಾಟ ನಡೆದಿದ್ದು, ಲಾರಿ ಮಾಲೀಕನ ಬಗ್ಗೆ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ. ಘಟನೆಯ ದೃಶ್ಯ ನೋಡಿದ ಬಹುತೇಕರು ಗಾಬರಿಯಾಗಿ ಸ್ಥಳದಿಂದ ಕಾಲ್ಕೀತ್ತರು.
ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದ್ದು, ಈರುಳ್ಳಿ ಲಾರಿಯನ್ನೂ ಠಾಣೆಗೆ ತರಲಾಗಿದೆ.