Posts Slider

Karnataka Voice

Latest Kannada News

ಇಲ್ಲಿನ್ನೂ ಸರಕಾರಿ ಕಾಲೇಜು ಆರಂಭವಾಗಿಲ್ಲ.. ಬೀದಿಗಿಳಿದಿದ್ದಾರೆ ವಿದ್ಯಾರ್ಥಿಗಳು..!  

1 min read
Spread the love

ಹಾವೇರಿ: ರಾಜ್ಯಾಧ್ಯಂತ ಅಂತಿಮ ವರ್ಷದ ಪದವಿ ತರಗತಿಗಳು ಪ್ರಾರಂಭವಾಗಿ 15 ದಿನಗಳು ಕಳೆದರೂ ಹಾವೇರಿಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಾತ್ರ ಯಾವುದೇ ತರಗತಿಗಳನ್ನು ಪ್ರಾರಂಭ ಮಾಡಿಲ್ಲವೆಂದು ಆರೋಪಿಸಿ, ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮುಂದೆ ದಿಢೀರ್ ಪ್ರತಿಭಟನೆ ಮಾಡಲಾಯಿತು.

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಪದವಿ ವಿದ್ಯಾರ್ಥಿನಿಯರ ತರಗತಿಗಳನ್ನು  ಪ್ರಾರಂಭ ಮಾಡಬೇಕೆಂದು ಆಗ್ರಹಿಸಿ ಹಾಗೂ ಮೂಲಭೂತ ಸೌಲಭ್ಯಗಳ ಸಮಸ್ಯೆ ಪರಿಹರಿಸಲು ಸ್ಥಳೀಯ ಶಾಸಕ ನೆಹರು ಓಲೇಕಾರ ಆಗಮಿಸಬೇಕೇಂದು ಒತ್ತಾಯಿಸಿ ಹೋರಾಟ ನಡೆಸಲಾಯಿತು.

ಜನವರಿ 01 ರಿಂದ ತರಗತಿಗಳು ಪ್ರಾರಂಭವಾಗಿ ವಿದ್ಯಾರ್ಥಿಗಳು ದಿನನಿತ್ಯ ಸಕ್ರಿಯವಾಗಿ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ,  ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು 15 ದಿನಗಳು ಕಳೆದರು ಕೂಡ ಇನ್ನೂ ತರಗತಿಗಳನ್ನು ಪ್ರಾರಂಭ ಮಾಡದೆ ಹಾಗೂ ಕರೋನ ಸಂದರ್ಭದಲ್ಲೂ ಕೂಡ ಯಾವುದೇ ಆನ್ಲೈನ್ ತರಗತಿಗಳನ್ನು ನಡೆಸದೆ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ದೂರ ಉಳಿವಂತೆ ಮಾಡುವ ಮೂಲಕ ಕಾಲೇಜಿನ ಪ್ರಾಂಶುಪಾಲರು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಆರೋಪಿಸಿದರು.

ವಿದ್ಯಾರ್ಥಿನಿ ನೇತ್ರಾವತಿ ಬಿ. ಎಂ ಮಾತನಾಡಿ, ವಿದ್ಯಾರ್ಥಿನಿಯರು ದಿನನಿತ್ಯವು ಕಾಲೇಜು ಮತ್ತು ಮನೆಗೆ ಅಲೆದಾಡುತ್ತಿದ್ದು ಸಂಪೂರ್ಣ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರಿಗೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡರು ಸಹ ಮೇಲಾಧಿಕಾರಿಗಳಿಗೆ , ಸ್ಥಳೀಯ ಶಾಸಕರಿಗೆ ಪತ್ರ ಬರೆದಿದ್ದವೆಂಬ ಹೇಳಿಕೆಯೊಂದು ಬಿಟ್ಟರೆ ತರಗತಿಗಳನ್ನು ಪ್ರಾರಂಭ ಮಾಡಲು ಮುಂದಾಗುತ್ತಿಲ್ಲವೆಂದು ಆರೋಪಿಸಿದರು.

ವಿಶ್ವವಿದ್ಯಾಲಯದ  ಸುತ್ತೊಲೆಯ ಪ್ರಕಾರ 1, 3 ಮತ್ತು 5ನೇ ಸೆಮಿಸ್ಟರ್ ಗೆ ವಿದ್ಯಾರ್ಥಿನಿಯರು ದಿನಾಂಕ:18/01/2021 ರಿಂದ 30/01/2021 ರ ವರೆಗೆ ಪರೀಕ್ಷಾ ಅರ್ಜಿಗಳನ್ನು ಭರ್ತಿ ಮಾಡಬೇಕೆಂದು ಆದೇಶ ಹೊರಡಿಸಿದ್ದು ವಿದ್ಯಾರ್ಥಿನಿಯರು ಆತಂಕ ಪಡುವಂತಾಗಿದೆ. ಅತಿಥಿ ಶಿಕ್ಷಕರ ನೇಮಿಸದೆ, ಪಾಠ ಮಾಡದೆ, ಪುಸ್ತಕ ಮುದ್ರಿಸದೆ, ವಿದ್ಯಾರ್ಥಿನಿಯರ ಜೀವನದ ಜೊತೆಗೆ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ನೇತೃತ್ವದಲ್ಲಿ ವಿದ್ಯಾರ್ಥಿನಿಯರು ದಿಢೀರ್ ಧರಣಿ ಮಾಡಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ನೆಹರು ಓಲೇಕಾರ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ನಾಳೆಯಿಂದ ತರಗತಿಗಳನ್ನು ಪ್ರಾರಂಭ ಮಾಡಲು ಅತಿಥಿ ಶಿಕ್ಷಕರೊಂದಿಗೆ ದೂರವಾಣಿಯಲ್ಲಿ ಮಾತಾನಾಡಿ ನಾಳೆಯಿಂದ ತರಗತಿಗೆ ಬರಲು ಮನವಿ ಮಾಡಿದರು ಹಾಗೂ ಖಾಯಂ ಉಪನ್ಯಾಸಕರನ್ನು ನೇಮಕ ಮಾಡಲು ಸರಕಾರಕ್ಕೆ ಪತ್ರ ಬರೆದು ಸಚಿವರೊಂದಿಗೆ ಚರ್ಚಿಸುವೆ ಎಂದು ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಕಾವ್ಯ ಹಡಗಲಿ, ಸೌಂದರ್ಯ ಕೆ.ಕೆ, ಗಾಯತ್ರಿ ಎಸ್. ಎಚ್, ಸುಧಾ ಎಫ್. ಡಿ, ವಿದ್ಯಾ ಎಸ್. ವಿ, ನೀಲಮ್ಮ ವಿ. ಎಮ್, ಪ್ರಿಯಾಂಕಾ. ಕೆ. ವಿ, ಸುಮಲತಾ ಬಿ. ಕೆ,ಪೂರ್ಣಿಮಾ ಯು. ಎಂ, ಪೂಜಾ ಎಲ್. ಡಿ, ಸುಮೀನಾ ಎಸ್. ಎಸ್, ಸೀಮಾ ಎಂ. ಎನ್, ಉಮೀಶಾಲಮ್ ಐ. ಎಸ್, ಮಲಾನ ಎಂ.ಎಂ, ರಾಜೇಶ್ವರಿ ರೆಡ್ಡಿ , ಅಕ್ಷತಾ ಬಿ. ಕೆ, ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *