ಧಾರವಾಡ: ಮಾಜಿ ಶಾಸಕರ ಊರಲ್ಲಿ ರೈತ ಆತ್ಮಹತ್ಯೆ
1 min read
ಧಾರವಾಡ: ಮಾಡಿದ ಸಾಲ ತೀರಿಸಲು ಮುಂಗಾರಿನ ಬೆಳೆಯು ಕೈ ಹಿಡಿಯಲಿಲ್ಲವೆಂದು ಬೇಸರಿಸಿಕೊಂಡ ರೈತನೋರ್ವ ಮನೆಯಲ್ಲಿ ಎಲ್ಲರೂ ಮಲಗಿದಾಗಲೇ ನೇಣು ಹಾಕಿಕೊಂಡು ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ನಡೆದಿದೆ.
ಉಪ್ಪಿನಬೆಟಗೇರಿ ಗ್ರಾಮದ ವಿರಕ್ತಮಠ ಓಣಿಯ ಜಗದೀಶ ಈರಯ್ಯ ಇಂಚಗೇರಿಮಠ ಎಂಬ ರೈತನೇ, ಇಂದು ಬೆಳಗಿನ ಜಾವ 3.30ರ ಸುಮಾರಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದ್ದು, ಮನೆಯವರಿಗೆ ಘಟನೆ ಬಗ್ಗೆ ತಡವಾಗಿ ಗೊತ್ತಾಗಿದೆ.
ತನ್ನ ಪಾಲಿಗೆ ಬಂದ ನಾಲ್ಕು ಎಕರೆ ಜಮೀನಿನಲ್ಲಿ ಹುಲುಸಾಗಿ ಬೆಳೆದಿದ್ದ ಬೆಳೆ, ಮಳೆಯ ಆವಾಂತರದಿಂದ ಕೈಕೊಟ್ಟಿತ್ತು. ಅದಾದ ನಂತರವೂ ಬೆಳೆ ಕೈ ಹಿಡಿಯಬಹುದೆಂದು ರೈತನಿಗೆ ಅನಿಸಿತ್ತಾದರೂ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಮನೆ ಕಟ್ಟಲು 5 ಲಕ್ಷ ರೂಪಾಯಿ ಸಾಲ ಪಡೆದು, ಅದನ್ನ ತೀರಿಸಲಾಗದೇ ಹೀಗೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಪ್ರಕರಣ ಗರಗ ಠಾಣೆಯಲ್ಲಿ ದಾಖಲಾಗಿದೆ.