ನವಲಗುಂದ ಹಿರಿಯ ಕಾಂಗ್ರೆಸ್ಸಿಗರು ಬಿಜೆಪಿ ಜೊತೆ ಒಳಒಪ್ಪಂದ- ವರದಿ ಮಾಡಿ ಕೆಪಿಸಿಸಿಗೆ ರವಾನೆ
1 min read
ಹುಬ್ಬಳ್ಳಿ: ಪುರಸಭೆಯ ಚುನಾವಣೆಯ ಪೂರ್ವದಲ್ಲಿ ನವಲಗುಂದದ ಹಿರಿಯ ಕಾಂಗ್ರೆಸ್ಸಿಗರು ಭಾರತೀಯ ಜನತಾ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎಂಬ ಮಾಹಿತಿಯಿದೆ. ಇದರ ಬಗ್ಗೆ ಸಮಗ್ರವಾಗಿ ವಿಚಾರಣೆ ನಡೆಸಿ, ಮಾಹಿತಿಯನ್ನ ಕೆಪಿಸಿಸಿಗೆ ಕಳಿಸಲಾಗುವುದೆಂದು ಧಾರವಾಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.
ನವಲಗುಂದ ಪುರಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್ಸಿಗೆ ಭೇಷರತ್ತಾಗಿ ಬೆಂಬಲ ನೀಡಿದ್ದರ ಬಗ್ಗೆ ಮಾತನಾಡುತ್ತಿದ್ದ ಅನಿಲಕುಮಾರ ಪಾಟೀಲ, ನಮಗೆ ಬಯಸದೇ ಬಂದ ಭಾಗ್ಯವಿದು. ಅಧ್ಯಕ್ಷ-ಉಪಾಧ್ಯಕ್ಷರು ಯುವಕರಿದ್ದು ಉತ್ತಮವಾಗಿ ಕಾರ್ಯವನ್ನ ನಡೆಸಲಿದ್ದಾರೆ. ಪಟ್ಟಣದ ಅಭಿವೃದ್ಧಿಗಾಗಿ ಶ್ರಮ ವಹಿಸಲಿದ್ದಾರೆಂದು ಹೇಳಿದರು.
ಭಾರತೀಯ ಜನತಾ ಪಕ್ಷದ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ, ಕೆಲವು ಹಿರಿಯ ಕಾಂಗ್ರೆಸ್ಸಿಗರು ಆ ಥರದ ಪ್ರಯತ್ನವನ್ನ ಮಾಡಿದ್ದರು. ಹಾಗಾಗಿಯೇ ಆ ಬಗ್ಗೆ ಸಮಗ್ರ ಮಾಹಿತಿಯನ್ನ ತೆಗೆದು ಕೆಪಿಸಿಸಿಗೆ ಕಳಿಸಲಾಗುವುದು ಎಂದು ಪಾಟೀಲ ಹೇಳಿದರು.
ಪುರಸಭೆಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಇಷ್ಟೊಂದು ಜಿದ್ದಾಜಿದ್ದಿಗೆ ಬಿದ್ದು ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಗೆ ಬಯಸದೇ ಬಂದ ಭಾಗ್ಯ ಎಂದು ಹೇಳುವಂತಾಗಿದೆ. ನವಲಗುಂದ ಕ್ಷೇತ್ರದಲ್ಲಿ ಕೊನೆಗೂ ಜೆಡಿಎಸ್ ಅಧಿಕಾರದಿಂದ ದೂರ ಉಳಿಯುವಂತೆ ನೋಡಿಕೊಂಡಿದ್ದು ಮಾತ್ರ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.