Posts Slider

Karnataka Voice

Latest Kannada News

ಅಪ್ಪನ ಆತ್ಮಹತ್ಯೆ ಕ್ಯಾಮರಾ ಹಿಡಿಸಿತು- ಮಗಳ ಪ್ರೀತಿ ಹುಟ್ಟಿದೂರಿಗೆ ಮರಳಿಸಿತು- ಪ್ರಶಸ್ತಿ ಪಡೆದ ವಿನಾಯಕರ ಬಗ್ಗೆ ನಿಮಗೆಷ್ಟು ಗೊತ್ತು..!

1 min read
Spread the love

ಹುಬ್ಬಳ್ಳಿ: ಬಾರ್ ಗಳಲ್ಲಿ ಕೆಲಸ ಮಾಡುತ್ತ, ಗಿರಾಕಿಗಳಿಂದ ನಿಂದಿಸಿಕೊಳ್ಳುತ್ತ ಹೊರಟವನಿಗೆ, ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಕೈಸನ್ನೆಯ ಕ್ಯಾಮರಾಮನ್ ಕನಸನ್ನೇ  ಬದುಕು ಮಾಡಿಕೊಳ್ಳಬೇಕೆಂದು ಹೊರಟವನಿಗಿಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಜಿಲ್ಲಾ ಪ್ರಶಸ್ತಿ ಲಭಿಸಿದೆ.

ಹೌದು.. ನಾವೂ ಹೇಳಲು ಹೊರಟಿದ್ದು ದಿಗ್ವಿಜಯ ಟಿವಿಯಲ್ಲಿ ಕ್ಯಾಮರಾಮನ್ ಆಗಿರುವ ವಿನಾಯಕ ಲಕ್ಷ್ಮಣಸಾ ಪೂಜಾರಿಯವರ ಬಗ್ಗೆ. ತಾನೊಂದು ಬಗೆದರೇ ದೈವವೊಂದು ಬಗೆಯುವುದು ಎಂಬರ್ಥದಲ್ಲಿ ವಿನಾಯಕರ ಬದುಕು.

ಪ್ರಶಸ್ತಿ ಪುರಸ್ಕೃತ ವಿನಾಯಕ ಪೂಜಾರಿಯವರ ಜೀವನವನ್ನ ನೋಡಿದ್ರೇ ಇವತ್ತು ಅವರಿಗೆ ಸಿಕ್ಕ ಗೌರವ ಸಾರ್ಥಕವೆನಿಸತ್ತೆ. ಅವತ್ತು ತಂದೆ ಲಕ್ಷ್ಮಣಸಾ ಪೂಜಾರಿ ಲೋಕಲ್ ಪ್ಯಾನ್ಸಿ ಸೋಡಾದಲ್ಲಿ ಕೆಲಸ ಮಾಡುತ್ತಿದ್ದರೇ, ಈ ವಿನಾಯಕ ಅವರು ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಗಿರಾಕಿಗಳ ಅತಿಯಾದ ನಿಂದನೆ ಸಾಕಾಗಿ ಅಲ್ಲಿಂದ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ, ಬದುಕು ಕಟ್ಟಿಕೊಂಡಿದ್ದರು.

ಇವರಿದ್ದ ಪ್ರದೇಶಕ್ಕೆ ಅಂಟಿಕೊಂಡೇ ಇದ್ದ ಶ್ರೀ ಪೋಟೊ ಸ್ಟುಡಿಯೋ ವಿನಾಯಕ ಪೂಜಾರಿಯವರ ಕುಟುಂಬಕ್ಕೆ ಹತ್ತಿರವಾಗಿತ್ತು. ವಿನಾಯಕ ಅವರ ತಾಯಿ ಸರೋಜಾಬಾಯಿ ರೊಟ್ಟಿ ಬಡಿದು ಕೊಟ್ಟರೇ, ಇವರು ಅವುಗಳನ್ನ ಹೊಟೇಲ್ ಗಳಿಗೆ ಕೊಟ್ಟು ಬರುತ್ತಿದ್ದರು. ಸ್ಟುಡಿಯೋದ ಬಳಿ ಆಗಾಗ ಹೋಗುತ್ತಿದ್ದದ್ದು ಕೂಡಾ ಚೂರು ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು.

ವಿನಾಯಕ ಪೂಜಾರಿಯವರ ಕೆಲವರಿಗೆ ‘ಪಾಲ್ತು’ ಆಗಿ ಕಾಣುತ್ತಿದ್ದರಿಂದ ತಂದೆ ಲಕ್ಷ್ಮಣಸಾ ಅವರಿಗೆ ಅಣುಕಿಸುತ್ತಿದ್ದರು. ಆಗ ವಿನಾಯಕರ ತಂದೆ, ಅವರಿಗೆಲ್ಲ ಕ್ಯಾಮರಾ ಶೂಟ್ ಮಾಡುವ ಹಾಗೇ ಕೈಸನ್ನೇ ಮಾಡಿ, ನೋಡು ಅವನು ಹಾಗೇ ಆಗ್ತಾನೆ ಎಂದುಬಿಟ್ಟರು. ವಿನಾಯಕ ಪೂಜಾರಿಯವರ ಬದುಕು ಇವತ್ತು ಪ್ರಶಸ್ತಿ ಪಡೆಯುವ ಹಾಗಾಯಿತು.

ತಂದೆಯ ಕೈಸನ್ನೆಯನ್ನ ಮನಸ್ಸಲ್ಲಿಟ್ಟುಕೊಂಡು ಪವನ ವಿಜನ್ ದಲ್ಲಿ ಹೆಲ್ಪರ್ ಆಗಿ ಕೆಲಸ ಮಾಡತೊಡಗಿದರು. ಅಲ್ಲಿ ಮದುವೆಯ ಕಾರ್ಯಕ್ರಮದಲ್ಲಿದ್ದಾಗಲೇ ತಂದೆ ಲಕ್ಷ್ಮಣಸಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾದ ನಂತರ, ವಿನಾಯಕರ ಜೀವನ ಮತ್ತಷ್ಟು ಘಾಸಿಯಾಗಿತ್ತು. ಆದರೆ, ತಂದೆಯ ಕನಸು..

ಅಪ್ಪನ ಕಾರ್ಯವನ್ನ ಮಾಡಿ ನೇರವಾಗಿ ಬಂದು ಸೇರಿದ್ದು ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕ ಕಿರಣ ಬಾಕಳೆಯವರಲ್ಲಿಗೆ. ಅದಾದ ನಂತರ ಅಮೋಘ ಕೇಬಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ, ಸುವರ್ಣ ಆರಂಭವಾಗುವ ಸಮಯದಲ್ಲಿ ಶ್ಯಾಮಸುಂದರ ಕುಷ್ಟಗಿ ಹಾಗೂ ಸಧ್ಯ  ಪಬ್ಲಿಕ್ ಟಿವಿಯ ಹುಬ್ಬಳ್ಳಿಯ ವರದಿಗಾರರಾಗಿರುವ ವೀರೇಶ ದಾನಿ ಸಹಾಯದಿಂದ ಹೊರಟು ನಿಂತಿದ್ದು ಸುವರ್ಣ ಟಿವಿಗೆ… ಅಪ್ಪನ ಕೈಸನ್ನೆಯ ಕನಸು ನನಸಾದ ಸಮಯ.

ಬರೋಬ್ಬರಿ ಎಂಟು ವರ್ಷದ ದುಡಿಮೆಯ ನಂತರ ಬೆಂಗಳೂರಿಗೆ ವಿನಾಯಕ ಪೂಜಾರಿಯವರ ವರ್ಗಾವಣೆಯಾಯಿತು. ಆದರೆ, ಕುಟುಂಬ ಹುಬ್ಬಳ್ಳಿಯಲ್ಲೇ. ತಾಯಿ, ಪತ್ನಿ ಮತ್ತು ಮಗಳು. ಹದಿನೈದು ದಿನಕ್ಕೋಮ್ಮೆ ಊರಿಗೆ ಬರುವುದು ಬೆಳ್ಳಂಬೆಳಿಗ್ಗೆ ಆರು ಗಂಟೆಗೆ ಟ್ರೇನ್ ಹಿಡಿಯುವುದು ನಡೆಯುತ್ತಲೇ ಇದ್ದಾಗ, ಮಗಳು ಅರ್ಪಿತಾ, ರಾತ್ರಿ ಕೈ ಹಿಡಿದು ಮಲಗಿದ ಅಪ್ಪ ಬೆಳಗಾದಾಗ ಇಲ್ಲದೇ ಇರುವುದನ್ನ ನೋಡಿ, ಕಣ್ಣೀರಾಗುವುದನ್ನ ಸಹಿಸಿಕೊಳ್ಳಲು ಆಗದೇ, ಹುಬ್ಬಳ್ಳಿಯತ್ತ ಮುಖ ಮಾಡುತ್ತಿದ್ದಾಗಲೇ, ಬದುಕಿಗೆ ಆಸರೆಯಾಗಿದ್ದು, ಕ್ಯಾಮರಾಮನ್ ಮುಖ್ಯಸ್ಥರಾಗಿದ್ದ ಸತ್ಯಭೋದ ಜೋಶಿಯವರು.

ದಿಗ್ವಿಜಯ ಟಿವಿ ಆರಂಭವಾಗುತ್ತಿದ್ದ ಸಮಯದಲ್ಲಿ ಕರೆದು ಹುಬ್ಬಳ್ಳಿಗೆ ವರ್ಗಾವಣೆ ಮಾಡಿದ್ರು. ಇದೀಗ ವಿನಾಯಕ ಪೂಜಾರಿಯವರು, ತಾಯಿ ಸರೋಜಾಬಾಯಿ, ಪತ್ನಿ ಸೀಮಾ, ಮಕ್ಕಳಾದ ಅರ್ಪಿತಾ, ಶ್ರದ್ಧಾ ಹಾಗೂ ಮಗ ಶ್ಲೋಕನೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಯಾವುದೇ ಮನುಷ್ಯ ಸಾಧನೆಯ ಪ್ರಮುಖ ಸ್ಥಳದಲ್ಲಿರಬೇಕಾದರೇ, ಆತ ಸುಮ್ಮನೆ ಬಂದಿರುವುದಿಲ್ಲ. ನೂರೆಂಟು ಸಂಕಷ್ಟಗಳನ್ನ, ಕನಸುಗಳನ್ನ ಹೊತ್ತು ಬಂದಿರುತ್ತಾನೆ ಎಂಬುದು ವಿನಾಯಕ ಪೂಜಾರಿಯವರಿಂದಲೂ ಗೊತ್ತಾಗತ್ತೆ. ಇಂತಹವರಿಗೆ ಮತ್ತಷ್ಟು ಪ್ರಶಸ್ತಿಗಳು ಬರಲಿ, ತಂದೆಯ ಕನಸು ಮತ್ತಷ್ಟು ಹೆಚ್ಚಿಸಲಿ ಎಂದು ಬಯಸೋಣ..


Spread the love

Leave a Reply

Your email address will not be published. Required fields are marked *