ಬಿಜೆಪಿ ಸಚಿವರು ಪರ್ಸೆಂಟೇಜ್ ಪಡೆಯಲು ಪತ್ನಿ-ಸಂಬಂಧಿಕರನ್ನ ಬಿಟ್ಟಿದ್ದಾರೆ- ಕಾಂಗ್ರೆಸ್ ಮುಖಂಡ
1 min read
ಹುಬ್ಬಳ್ಳಿ: ಕಂದಾಯ ಸಚಿವ ಆರ್. ಅಶೋಕ ನೆರೆ ವೀಕ್ಷಣೆಗೆ ಬಂದಾಗ ಕೂಡ ಆರ್.ಆರ್. ನಗರದ ಉಪಚುನಾವಣೆ ಬಡಬಡಿಸುತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಟೀಕಿಸಿದ್ದು ಅಸಹ್ಯ ಹುಟ್ಟಿಸುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಚಿವರಿದ್ದರೂ, ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೆರೆ ಹಾವಳಿ ಪ್ರದೇಶಕ್ಕೆ ಹೋಗದೇ ಸರ್ಕಿಟ್ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ಮಾಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ವೇದವ್ಯಾಸ ಕೌಲಗಿ ಹೇಳಿದ್ದಾರೆ.
ರಮೇಶಗೆ ಕೇವಲ ಅಧಿಕಾರ, ದುಡ್ಡು ಮಾತ್ರ ಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಗೆ ಜನರ ಕಷ್ಟಕ್ಕಿಂತ ಫೈಲುಗಳಿಗೆ ಸಹಿ ಮಾಡುವಾಗ ತಮ್ಮ ಆಪ್ತರ ಹತ್ತಿರ ಮಾಮೂಲು ಬಂದ ಬಗ್ಗೆ ಅಷ್ಟೇ ಕಾಳಜಿ. ಪರ್ಸೆಂಟೇಜ್ ವಸೂಲಿಗೆ ಸ್ವತಃ ಪತಿ, ಸಂಬಂಧಿಕರನ್ನು ಅಧಿಕಾರಿಗಳ ಹತ್ತಿರ ಬಿಟ್ಟಿದ್ದಾರೆ. ಇಲಾಖೆಯ ಎಲ್ಲ ಜನಪರ ಯೋಜನೆಗಳನ್ನು ಹಾಳು ಮಾಡಿದ್ದಾರೆ. ಡಿಸಿಎಂ ಸವಡಿ ಜನರಿಂದ ತಿರಸ್ಕಾರಗೊಂಡು ಕಾಟಾಚಾರಕ್ಕೆ ಇವತ್ತಿನ ಪ್ರವಾಸ ಮಾಡಿದ್ದಾರೆ ಎಂದು ಕೌಲಗಿ ಟೀಕಿಸಿದ್ದಾರೆ.
ಲೋಕೋಪಯೋಗಿ ಸಚಿವ ಕಾರಜೋಳ ಮೊದಲ ದಿನ ತಮ್ಮ ಉದ್ಯೋಗದ ಬಗ್ಗೆ ಹೇಳಿದವರು ಮರುದಿನ ಶಿರಾ ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಭಾಗವಹಿಸಿದ್ದಕ್ಕೆ ಮಾಧ್ಯಮಗಳ ಮುಂದೆ ನಗೆ ಪಾಟಲಿಗೀಡಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಬೇಜವಾಬ್ದಾರಿ ಕಂದಾಯ ಸಚಿವರನ್ನು ನೋಡಲಿಲ್ಲ. ಬೆಂಗಳೂರೇ ಅವರಿಗೆ ಸರ್ವಸ್ವ. ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಂತ್ರಸ್ಥರೆಲ್ಲ ಮನೆ-ಮಾರು ಕಳೆದುಕೊಂಡ, ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದವರ ಬಗ್ಗೆ ಕಾಳಜಿ ಇಲ್ಲದ ಸಚಿವರುಗಳಿಗೆ ಉಪಚುನಾವಣೆಯೇ ಮುಖ್ಯವಾಗಿದೆ ಎಂದು ಕೌಲಗಿ ಅಸಮಾಧಾನವ್ಯಕ್ತಪಡಿಸಿದ್ದಾರೆ.
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡ ಬಾಗಿಲು ಹಾಕಿದ ಹಾಗೆ ಎಲ್ಲ ಮುಗಿದು ಸಂತ್ರಸ್ತರು ಬೀದಿಗೆ ಬಿದ್ದ ಮೇಲೆ ಸಚಿವರುಗಳು, ಮುಖ್ಯಮಂತ್ರಿ ಇನ್ನು ಎರಡು ದಿನ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆಂದರೆ ಈ ಸರಕಾರಕ್ಕೆ ಮಾನ, ಮರ್ಯಾದೆ, ನಾಚಿಕೆ ಇಲ್ಲ. ರಾಜ್ಯಾಧ್ಯಕ್ಷ ಕಟೀಲ ಸಚಿವರನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಬಿಟ್ಟು, ಡಿ.ಕೆ. ಶಿವಕುಮಾರ ಅವರನ್ನುದ್ದೇಶಿಸಿ ಬಂಡೆಗೆ ಡೈನಾಮೈಟ್ ಹಚ್ಚುವುದಾಗಿ ಹೇಳಿದರು. ಡೈನಾಮೈಟ್ ಹಚ್ಚುವುದು, ಬಾಂಬ್ ಹಾಕುವುದು, ಮಸೀದಿ ಕೆಡುವುದು, ಚರ್ಚ ಮೇಲೆ ದಾಳಿ ಮಾಡುವುದು, ನೈತಿಕ ಪೊಲೀಸ್‌ಗಿರಿ ತೋರಿಸುವುದು ಇವೇ ಬಿಜೆಪಿಯ ಅಜೆಂಡಾ ಆಗಿವೆ. ದುಡ್ಡು, ಅಧಿಕಾರಕ್ಕಾಗಿ ಕಾಂಗ್ರೆಸ್ ತ್ಯಜಿಸಿ ಬಂದವರಿಗೆ ಭ್ರಮನಿರಶನವಾಗಿದ್ದರೂ ಇನ್ನೂ ಅಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ರಾಜ್ಯದ ಜನತೆ ಪ್ರಧಾನಿಗೆ ಒಂದು ಗಂಭೀರ ಸಂದೇಶ ಕಳಿಸುತ್ತಾರೆ. ರಾಜ್ಯದಲ್ಲಿ ಸರಕಾರ ದಿವಾಳಿಯಾಗಿದೆ. ಕೊರೋನಾ ಕಂಟ್ರೋಲ್‌ಗೆ ಬರುತ್ತಿಲ್ಲ. ಕೋವಿಡ್ ಉಪಕರಣದಲ್ಲಿ ಭ್ರಷ್ಟಾಚಾರ ಆಗಿದೆ. ಸಚಿವರು ಬರೀ ಹೇಳಿಕೆ ನೀಡುವುದು, ವಿರೋಧ ಪಕ್ಷದ ನಾಯಕರನ್ನು ಟೀಕಿಸುವುದು, ಕೆಪಿಸಿಸಿ ಅಧ್ಯಕ್ಷರನ್ನು ಟೀಕಿಸುವುದು ಕೆಲಸವಾಗಿದೆ. ಇಂಥ ಬೇಜವಾಬ್ದಾರಿ ಸರ್ಕಾರಕ್ಕೆ ಧಿಕ್ಕಾರವೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ವೇದವ್ಯಾಸ ಕೌಲಗಿ ಹೇಳಿದ್ದಾರೆ.