ಗೂಗಲ್ ಮ್ಯಾಪ್ ಮೂಲಕ ಮನೆ ಸರ್ಚ್ ಮಾಡಿ ಕಳ್ಳತನ: ಪೊಲೀಸರ ಬಲೆಗೆ ಬಿದ್ದ ಆಧುನಿಕ ಕಳ್ಳರು
ಬೆಳಗಾವಿ: ಗೂಗಲ್ ಮ್ಯಾಪ್ ಮೂಲಕ ಹೊರವಲಯದ ಮನೆಗಳನ್ನ ಪತ್ತೆ ಮಾಡಿ, ಯಾರೂ ಇಲ್ಲದ್ದನ್ನ ನೋಡಿ ಮನೆಯನ್ನ ಲೂಟಿ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನ ಪತ್ತೆ ಹಚ್ಚುವಲ್ಲಿ ಕ್ಯಾಂಪ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಇಸ್ಪುರಲಿ ಗ್ರಾಮದ ಪ್ರಶಾಂತ ಕಾಶಿನಾ ಕರೋಶಿ ಹಾಗೂ ಆಜರಾ ತಾಲೂಕಿನ ಧಾಮಣಿ ಗ್ರಾಮದ ಅವಿನಾಶ ಶಿವಾಜಿ ಅಡಾವಕರ್ ಎಂಬ ಇಬ್ಬರನ್ನ ಬಂಧನ ಮಾಡಲಾಗಿದ್ದು, ಬಂಧಿತರಿಂದ 28 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಒಂದು ಮಾರುತಿ ಸುಜಕಿ ಬಲೆನೊ ಕಾರ್‍ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬೆಳಗಾವಿಯ ಲಕ್ಷ್ಮೀ ಟೇಕ್ ನಕ್ಷತ್ರ ಕಾಲೋನಿಯ ಆಸ್ಟನ್ ಡಿಅಲ್ಮೇಡಾ ಮನೆ ಸೇರಿ ಇನ್ನಿತರ ಮೂರು ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದರು. 28 ಲಕ್ಷ, 8 ಸಾವಿರ ಮೌಲ್ಯದ ಚಿನ್ನಾಭರಣದ ಜೊತೆಗೆ 11ವರೆ ಲಕ್ಷ ಮೌಲ್ಯದ ಮಾರುತಿ ಸುಜುಕಿ ಬಲೆನೊ ಕಾರ್‍ನ್ನು ಕ್ಯಾಂಪ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೂಗಲ್ ಮ್ಯಾಪ್ ಮೂಲಕ ನಗರದ ಹೊರವಲಯದ ಮನೆಗಳ ಮಾಹಿತಿ ತಿಳಿದುಕೊಂಡು. ನಂತರ ಯಾವ ಮನೆ ಕೀಲಿ ಹಾಕಿರುತ್ತದೆ ಎಂದು ಅರಿತುಕೊಂಡು ಕನ್ನ ಹಾಕುತ್ತಿದ್ದರು.
ಕ್ಯಾಂಪ್ ಠಾಣೆ ಸಿಪಿಐ ಡಿ.ಸಂತೋಷಕುಮಾರ್, ಎಎಸ್‍ಐ ಬಿ.ಆರ್.ಡೂಗ್ ಸೇರಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಕಮೀಷನರ್ ಡಾ.ಕೆ.ತ್ಯಾಗರಾಜನ್, ಡಿಸಿಪಿ ಸಿ.ಆರ್.ನೀಲಗಾರ್, ಎಸಿಪಿ ಚಂದ್ರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.