“353” ಕೇಸ್ ತನಿಖೆಗೆ ಬೇರೆ ಇನ್ಸಪೆಕ್ಟರ್ ನೇಮಕ: ಎಸಿಪಿ ರಾಗಿ ಎಪಿಎಂಸಿ ಠಾಣೆಗೆ
1 min read
ಹುಬ್ಬಳ್ಳಿ: ನವನಗರದಲ್ಲಿ ವಕೀಲರ ಬಂಧನದ ಪ್ರಕರಣ ಹೊಸ ಹೊಸ ಟ್ವಿಸ್ಟ್ ಪಡೆಯುತ್ತಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿದ್ದ ಇನ್ಸಪೆಕ್ಟರ್ ಪ್ರಭು ಸೂರಿನ್ ಅವರನ್ನ ಈ ಕೇಸ್ ತನಿಖೆ ಮಾಡದಂತೆ ಮಾಡಿ, ವಿದ್ಯಾನಗರ ಠಾಣೆ ಇನ್ಸಪೆಕ್ಟರಗೆ ಜವಾಬ್ದಾರಿಯನ್ನ ವಹಿಸಿದ್ದಾರೆಂದು ಗೊತ್ತಾಗಿದೆ.
ವಕೀಲ ವಿನೋದ ಪಾಟೀಲ ಮೇಲೆ 353 ಕಲಂನಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ಬಂಧನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ವಕೀಲರು ಪ್ರತಿಭಟನೆ ನಡೆಸಿ, ಇನ್ಸಪೆಕ್ಟರ್ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಎಪಿಎಂಸಿ ಠಾಣೆಯ ಬಹುತೇಕ ಸಿಬ್ಬಂದಿಗಳು, ನಮಗೆ ಈ ಠಾಣೆಯಿಂದ ಮುಕ್ತಿ ಕೊಡಿ. ಹುಬ್ಬಳ್ಳಿ-ಧಾರವಾಡ ಯಾವುದಾದರೂ ಠಾಣೆಗೆ ವರ್ಗಾವಣೆ ಮಾಡಿ ಎಂದು ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಎಸಿಪಿ ರಾಗಿ ಪೊಲೀಸ್ ಠಾಣೆಗೆ ಬಂದು ಸಿಬ್ಬಂದಿಗಳ ಅಹವಾಲು ಕೇಳುತ್ತಿದ್ದಾರೆ.
ಬಂಧಿತರಾಗಿರುವ ಮೂವರಿಂದಲೇ ನವನಗರದ ವ್ಯವಸ್ಥೆ ಹದಗೆಟ್ಟಿದೆ. ಈ ಪ್ರಕರಣದಲ್ಲಿ ತನಿಖೆ ಮಾಡದೇ ಇನ್ಸಪೆಕ್ಟರ್ ವಿರುದ್ಧ ಕ್ರಮ ಜರುಗಿಸುವ ಹಾಗಿಲ್ಲವೆಂದು ಸಿಬ್ಬಂದಿಗಳು ಹೇಳಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಸಧ್ಯ ವರ್ಗಾವಣೆ ಬಯಸುತ್ತಿದ್ದ ಸಿಬ್ಬಂದಿಗಳಿಗೆ ಹಿರಿಯ ಅಧಿಕಾರಿಗಳು ಅಭಯ ನೀಡಿದ್ದು, ತನಿಖೆ ನಡೆಸದೇ ಯಾರ ವಿರುದ್ಧವೂ ಕ್ರಮ ಜರುಗಿಸುವುದಿಲ್ಲವೆಂದು ಹೇಳಿದ್ದರಿಂದ, ಸಿಬ್ಬಂದಿಗಳು ವರ್ಗಾವಣೆಯ ಬಗ್ಗೆ ಮಾತನಾಡುವುದನ್ನ ಬಿಟ್ಟಿದ್ದಾರೆ.