ಡಿಸೆಂಬರ್ 21ಕ್ಕೆ ರಾಜ್ಯಾಧ್ಯಂತ ಎಪಿಎಂಸಿ ಬಂದ್: ಶಂಕರಣ್ಣ ಮುನವಳ್ಳಿ
1 min read
ಹುಬ್ಬಳ್ಳಿ: ಎಪಿಎಂಸಿ ಸೆಸ್‌ನ್ನು 35 ಪೈಸೆಯಿಂದ ಏಕಾಏಕಿ 1ರೂಪಾಯಿ ಗೆ ಏರಿಕೆ ಮಾಡಿರುವುದನ್ನು ಕೈಬಿಡುವಂತೆ ಬೇಡಿಕೆ ಮುಂದಿಟ್ಟು ರಾಜ್ಯಾಧ್ಯಂತ ಡಿ.21ರಂದು ಎಪಿಎಂಸಿಗಳಲ್ಲಿ ವ್ಯಾಪಾರ ಬಂದ್ ಮಾಡಲು ವರ್ತಕರು ನಿರ್ಧರಿಸಿದ್ದಾರೆ.
ನಗರದ ಕೆಸಿಸಿಐ ಭವನದಲ್ಲಿ ಕೆಸಿಸಿಐ ಹಾಗೂ ಎಫ್‌ಕೆಸಿಸಿಐ ನೇತೃತ್ವದಲ್ಲಿ ಶುಕ್ರವಾರ ಧಾರವಾಡ, ವಿಜಯಪುರ, ಗದಗ, ಬ್ಯಾಡಗಿ, ರಾಣೆಬೆನ್ನೂರು, ಕೊಪ್ಪಳ, ದಾವಣಗೆರೆ ಸೇರಿ ಇತರ ಜಿಲ್ಲೆಗಳ 37ಕ್ಕೂ ಹೆಚ್ಚು ಎಪಿಎಂಸಿ ವರ್ತಕ ಸಂಘಟನೆ ಮುಖಂಡರು ಸಭೆ ನಡೆಸಿ ಈ ನಿರ್ಣಯ ಕೈಗೊಂಡರು. ಸೆಸ್ ಏರಿಕೆ ಕೈಬಿಡಲು ಒತ್ತಾಯಿಸಿ ಡಿ. 21ರಂದು ಒಂದು ದಿನದ ಸಾಂಕೇತಿಕ ಬಂದ್ ಮಾಡುವುದು. ಡಿ. 23ರಂದು ಬೆಂಗಳೂರಿನಲ್ಲಿ ಎಫ್‌ಕೆಸಿಸಿಐ ಭವನದಲ್ಲಿ ಸಭೆ ನಡೆಸಿ ಸಚಿವ ಎಸ್.ಟಿ.ಸೋಮಶೇಖರ ಅವರ ಗಮನಕ್ಕೆ ತರುವುದು. ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ, ಬಳಿಕ ಅನಿರ್ಧಿಷ್ಟಾವಧಿ ಬಂದ್‌ಗೆ ಕರೆ ನೀಡಲು ವರ್ತಕರು ಮುಂದಾಗಿದ್ದಾರೆ.
ಹಿಂದೆ ಎಪಿಎಂಸಿ ಸೆಸ್ 1.50 ರು. ಇದ್ದುದನ್ನು ರಾಜ್ಯ ಸರ್ಕಾರ ಈಚೆಗೆ ೩೫ಪೈಸೆಗೆ ಇಳಿಕೆ ಮಾಡಿತ್ತು. ಇದೀಗ ಡಿ. 15ರಂದು ದಿಢೀರ್ 1ರು. ಸೆಸ್ ಆಕರಣೆ ಮಾಡಲು ಸರ್ಕಾರ ಆದೇಶಿಸಿದೆ. ಎಪಿಎಂಸಿಯ ಮೂಲಸೌಲಭ್ಯ, ನಿರ್ವಹಣೆ ಕಾರಣ ನೀಡಿ ಸೆಸ್ ಹೆಚ್ಚಿಿಸಲಾಗಿದೆ ಎಂದು ಸರ್ಕಾರವು ಕಾರಣ ನೀಡಿದೆ. ಎಪಿಎಂಸಿ ಪ್ರಾಂಗಣದ ವರ್ತಕರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಈಗಾಗಲೆ ಹೊರಗೆ ಅಂದರೆ ಟ್ರೇಡ್ ಏರಿಯಾದಲ್ಲಿ ವ್ಯಾಪಾರ ನಡೆಸುವವರಿಗೆ ಯಾವುದೆ ಶುಲ್ಕ ಇಲ್ಲದಿರುವ ಕಾರಣ, ಸೆಸ್ ಏರಿಕೆ ನಿರ್ಧಾರ ಎಪಿಎಂಸಿ ವ್ಯಾಪಾರಸ್ಥರಿಗೆ, ರೈತರಿಗೆ ಸಂಕಷ್ಟ ತಂದಿಡಲಿದೆ.
ಸರ್ಕಾರ ಯಾವುದೆ ಚರ್ಚೆ ಇಲ್ಲದೆ, ಏಕಮುಖವಾಗಿ ಸೆಸ್ ಏರಿಕೆ ಮಾಡಿದೆ. ಇದರಿಂದಾಗಿ ಎಪಿಎಂಸಿಗಳು ನಶಿಸಿಹೋಗಲಿದ್ದು, ಜಿಎಸ್‌ಟಿ ತೆರಿಗೆ ಮೇಲೆಯೂ ಪರಿಣಾಮ ಬೀರಲಿದೆ. ಈ ನಿರ್ಧಾರ ಖಂಡಿಸಿ ಹೋರಾಟ ಅಗತ್ಯವಾಗಿದ್ದು, ಸೆಸ್ ಕುರಿತಾಗಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಒತ್ತಾಯಿಸಿದರು.
ಸಭೆಯ ನಡುವೆಯೆ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಕರಿಗೌಡರ ಅವರಿಗೆ ಕರೆ ಮಾಡಿ, ಸೆಸ್ ಇಳಿಕೆ ಕುರಿತು ತಕ್ಷಣ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಅವರು ಸರ್ಕಾರದ ಜತೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ಇದರಿಂದ ಸಮಾಧಾನಗೊಳ್ಳದ ಮುಖಂಡರು ಬಂದ್ ಕುರಿತು ನಿರ್ಧಾರ ಕೈಗೊಂಡರು.