ಭೀಕರ ರಸ್ತೆ ಅಪಘಾತ: ಐದು ಜನರ ದುರ್ಮರಣ- ಏಳು ಜನರ ಸ್ಥಿತಿ ಗಂಭೀರ
1 min read
ಚಿತ್ರದುರ್ಗ: ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಕ್ರೂಸರ್ ನಡುವೆ ನಡೆದ ಡಿಕ್ಕಿಯಲ್ಲಿ ಐವರು ಮೃತಪಟ್ಟು ಏಳು ಜನರು ತೀವ್ರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ಸಂಭವಿಸಿದೆ.
ಕ್ರೂಸರ್‌ನಲ್ಲಿದ್ದ ತಿಮ್ಮಣ್ಣ, ರತ್ನಮ್ಮ, ಮಹೇಶ, ಮತ್ತು ದುರ್ಗಪ್ಪ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕ್ರೂಸರ್ ಮತ್ತು ಬೆಂಗಳೂರಿನಿಂದ ಲಿಂಗಸುಗೂರಿನತ್ತ ತೆರಳುತ್ತಿದ್ದ ಬಸ್ ಮುಖಾಮುಖಿ ಡಿಕ್ಕಿಯಾಗಿದೆ.
ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಕಾರ್ಮಿಕರು ಕ್ರೂಸರ್ ಮಾಡಿಕೊಂಡು ತಡರಾತ್ರಿ ತಮ್ಮೂರಿನಿಂದ ಹೊರಟಿದ್ದರು. ಆದರೆ, ಯಮನಂತೆ ಬಂದ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದು ನಡುದಾರಿಯಲ್ಲಿಯೇ ಮರಳಿ ಬಾರದ ಲೋಕಕ್ಕೆ ಹೋಗುವಂತಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಏಳು ಜನರನ್ನ ಚಿಕಿತ್ಸೆಗೆ ಚಳ್ಳಕೆರೆ , ಚಿತ್ರದುರ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮೊಳಕಾಲ್ಮೂರು PSI ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.