ಸರ್ಕಾರ ಅನ್ನೋದಿದ್ರೆ ರಿಯಾಯಿತಿ ದರದಲ್ಲಿ ಈರುಳ್ಳಿ-ತರಕಾರಿ ವಿತರಣೆ ಮಾಡ್ಲಿ: ಆಪ್
1 min read
ಹುಬ್ಬಳ್ಳಿ: ಸಾಮಾನ್ಯ ಜನರ ಸಾಂಪ್ರದಾಯಿಕ ಆಹಾರ ಪದ್ದತಿಯಲ್ಲಿ ಉಳ್ಳಾಗಡ್ಡಿ ಬಹು ಪ್ರಮುಖ. ಆದರೆ ಪ್ರಸ್ತುತ ದಿನಗಳಲ್ಲಿ ಅತಿವೃಷ್ಟಿ ಹಾಗೂ ಇನ್ನಿತರ ಕಾರಣಗಳಿಂದ ಉಳ್ಳಾಗಡ್ಡಿ ಹಾಗೂ ತರಕಾರಿ ಜನಸಾಮಾನ್ಯರ ಕೈಗೆಟುಕದೇ ಏರುತ್ತಿದೆ. ಆಹಾರ ಭದ್ರತೆ ಸುನಿಶ್ಚಿತಗೊಳಿಸುವ ತನ್ನ ಜವಾಬ್ದಾರಿ ನಿಭಾಯಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಅನ್ನೋದು ಇದ್ದರೆ, ಕೂಡಲೇ ಮಧ್ಯ ಪ್ರದೇಶಿಸಿ, ರಿಯಾಯಿತಿ ದರದಲ್ಲಿ ಈರುಳ್ಳಿ ಮತ್ತು ತರಕಾರಿ ವಿತರಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ 100 ರಿಂದ 120 ರೂಪಾಯಿಗೆ ಏರಿಕೆಯಾಗಿದೆ. ಸಣ್ಣ ಈರುಳ್ಳಿಗೂ ಸಹ ಅಧಿಕ ಬೆಲೆ ಇರುವುದರಿಂದ ಗ್ರಾಹಕರಿಗೆ ಆರ್ಥಿಕ ಹೊರೆಯಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಯ ನಿರಂತರ ಏರಿಕೆಯ ಬೆನ್ನಲ್ಲೇ ಇದೀಗ ಈರುಳ್ಳಿಯ ಬೆಲೆ ಕೂಡ ಭಾರೀ ಏರಿಕೆ ಕಂಡಿದೆ. ಜನಸಾಮಾನ್ಯರಿಗೆ ಈರುಳ್ಳಿಯನ್ನು ಕೊಂಡುಕೊಳ್ಳಲಾಗದಷ್ಟರ ಮಟ್ಟಿಗೆ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರು ಈವಾಗ ಬೆಲೆ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಬರಿ ಈರುಳ್ಳಿ ಬೆಲೆ ಮಾತ್ರ ಹೆಚ್ಚಳ ಕಂಡಿಲ್ಲ, ತರಕಾರಿ ಬೆಲೆಗಳೂ ಸಹ ಗಗನಕ್ಕೆರಿವೆ. ಇದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ದರ ಏರಿಕೆಯಿಂದ ರೈತರಿಗೂ ಲಾಭಾ ದೊರಕಿಲ್ಲ. ಮಧ್ಯವರ್ತಿಗಳು ಅನುಚಿತ ಸಂಗ್ರಹಣೆ ಮಾಡುವುದನ್ನು ತಪ್ಪಿಸಲು ಸರಕಾರ ಯಾವುದ ಕ್ರಮ ತೆಗೆದುಕೊಂಡಿಲ್ಲ.
ಯಾವುದೇ ಆಹಾರ ಪದಾರ್ಥಗಳು ಬೆಲೆ ಏರಿಕೆಯಾದಾಗ ನಿಯಂತ್ರಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ, ಈ ವರೆಗೆ ಈರುಳ್ಳಿ ಮತ್ತು ತರಕಾರಿ ಬೆಲೆ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಂತೆ ಕಂಡು ಬರುವುದಿಲ್ಲ. ಹೀಗಾದರೆ, ಬಡ ಹಾಗೂ ಮಧ್ಯಮ ವರ್ಗದ ಜನರ ಗತಿ ಏನು? ಕೂಡಲೇ ರಾಜ್ಯ ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯಾದ್ಯಂತ ವಿಶೇಷ ತರಕಾರಿ ಮತ್ತು ಈರುಳ್ಳಿ ವಿತರಣಾ ಕೇಂದ್ರಗಳನ್ನು ತೆರೆದು, 30 ರೂ ಗೆ ಕೆಜಿಯಿಂತೆ ಉಳ್ಳಾಗಡ್ಡಿ ಮತ್ತು ಯೋಗ್ಯ ದರದಲ್ಲಿ ಇತರೆ ತರಕಾರಿ ಮಾರಾಟ ಮಾಡಿ, ಗ್ರಾಹಕರ ಹಿತಾಸಕ್ತಿ ಕಾಯಲು ಮುಂದಾಗಬೇಕು, ಇದರ ಜೊತೆಗೆ ರೈತರಿಗೂ ಲಾಭದಾಯಕವಾಗುವಂತೆ, ಮತ್ತು ಮಧ್ಯವರ್ತಿಗಳು ಅನುಚಿತ ಸಂಗ್ರಹಣೆ ಮಾಡುವುದನ್ನು ತಪ್ಪಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.