ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಂಪನಿ ಕಾರ್ಯಾರಂಭದ ದಿನಾಂಕ ಪ್ರಕಟ ಮಾಡಲಿ: ಆಮ್ ಆದ್ಮಿ ಪಾರ್ಟಿ ಒತ್ತಾಯ
1 min read
ಹುಬ್ಬಳ್ಳಿ: ಕರ್ನಾಟಕ ಸರ್ಕಾರ ಐಟಿ ವಲಯ ಅಭಿವೃದ್ಧಿಗೆ ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮವನ್ನು ಮುಖ್ಯ ತತ್ವವನ್ನಾಗಿ ಇಟ್ಟುಕೊಂಡು ಜಾರಿಗೊಳಿಸಿರುವ ಹೊಸ ಐಟಿ ನೀತಿ ಅಡಿಯಲ್ಲಿ, ಹುಬ್ಬಳ್ಳಿಯ ಇನ್ಫೋಸಿಸ್ ಕಂಪನಿ ಕಾರ್ಯಾರಂಭಕ್ಕೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷ ‘ಹುಬ್ಬಳ್ಳಿ ಕಾಲಿಂಗ್’ ಅಭಿಯಾನ ಆರಂಭಿಸಿದೆ. ಇದರ ಅಂಗವಾಗಿ ಮಾನ್ಯ ಉಪಮುಖ್ಯಮಂತ್ರಿ ಮತ್ತು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿವೃದ್ಧಿ ಸಚಿವರಾದ ಡಾ.ಅಶ್ವಥ್ ನಾರಾಯಣ್ ಅವರಿಗೆ ದಿನಾಂಕ 25 ನವೆಂಬರ್ 2020 ರಂದು ಮನವಿ ಪತ್ರ ನೀಡಿ ಒತ್ತಾಯಿಸಲಾಗಿತ್ತು.
ಹುಬ್ಬಳ್ಳಿಯ ಇನ್ಫೋಸಿಸ್ ಕಟ್ಟಡ ನಿರ್ಮಾಣಗೊಂಡು ಸರಿಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಕಳೆಯುತ್ತಾ ಬಂದರು ಕಾರ್ಯಾರಂಭ ಮಾಡಿಲ್ಲ. ಈ ಕಾರಣ 27 ನವೆಂಬರ್ 2020 ರಂದು, ಇನ್ಫೋಸಿಸ್ ನ ಹುಬ್ಬಳ್ಳಿ ಕ್ಯಾಂಪಸ್ ನ ಮುಂದೆ ಸೇರಿ, ಹುಬ್ಬಳ್ಳಿಯಲ್ಲಿ ಬಹುಬೇಗ ಕೆಲಸ ಪ್ರಾರಂಭಿಸುವಂತೆ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೆ ಆಮ್ ಆದ್ಮಿ ಪಕ್ಷ ‘ಹುಬ್ಬಳ್ಳಿ ಕಾಲಿಂಗ್’ ಅಭಿಯಾನದ ಮೂಲಕ ಒತ್ತಾಯಿಸಿದೆ. ಇದೀಗ ಬೃಹತ್ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯಾರಂಭ ಮಾಡುವುದು ಎಂಬ ಹೇಳಿಕೆ ಕೊಟ್ಟಿದ್ದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇದನ್ನು ಆಮ್ ಆದ್ಮಿ ಪಕ್ಷ ಸ್ವಾಗತ ಮಾಡುವುದು.
ಆದರೆ, ಸಚಿವ ಜಗದೀಶ ಶೆಟ್ಟರ ಅವರು ಇನ್ಫೋಸಿಸ್ ಕೆಲವು ತಾಂತ್ರಿಕ ಕಾರಣಗಳು ಮತ್ತು ಕೋರೊನಾದಿಂದಾಗಿ ಕಾರ್ಯಾರಂಭ ಮಾಡಿಲ್ಲ ಎಂದು ತಿಳಿಸಿದ್ದಾರೆ. ಕಂಪನಿಯ ಕಟ್ಟಡ ನಿರ್ಮಾಣ ಆಗಿ 3 ವರ್ಷ ಕಳೆದಿದ್ದರೇ, ಕೊರೋನಾ ಬಂದು ಆರು ತಿಂಗಳು ಕಳೆದಿವೆ. ಹೀಗಿದ್ದಾಗ್ಯೂ ಕೊರೋನಾ ಕಾರಣದಿಂದ ಕಂಪನಿ ಪ್ರಾರಂಭವಾಗಿಲ್ಲ ಎನ್ನುವುದು ಎಷ್ಟರಮಟ್ಟಿಗೆ ಸರಿ?ಇನ್ಫೋಸಿಸ್ ಆರಂಭದ ಕುರಿತು ಸಚಿವರು ಕಂಪನಿಯ ಕಾರ್ಯನಿರ್ವಾಹಕ ಮಂಡಳಿ ಜೊತೆಗೆ ಸಮಾಲೋಚನೆ ನಡೆಸಿದ್ದಾರೆಯೇ? ಅಥವಾ ರಾಜ್ಯ ಸರ್ಕಾರ ನಡೆಸಿದೀಯಾ? ಅಥವಾ ಐಟಿ ಸಚಿವರು ಕಂಪನಿ ಆರಂಭದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದಾರೆಯೇ ಎಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಹುಬ್ಬಳ್ಳಿ-ಧಾರವಾಡ ಜನತೆಯ ಮುಂದೆ ಹಂಚಿಕೊಳ್ಳಬೇಕಿದೆ. ಕಾರಣ ಇಲ್ಲಿನ ಯುವಕರು ಉದ್ಯೋಗ ಅವಕಾಶಗಳಿಗೆ ಹಾತೊರಿಯುತ್ತಿದ್ದಾರೆ.
ಕಳೆದ ಒಂದು ದಶಕದಲ್ಲಿ ಹುಬ್ಬಳ್ಳಿ-ಧಾರವಾಡ ದಲ್ಲಿ, ಸರ್ಕಾರ ಅಭಿವೃದ್ಧಿಪಡಿಸಿದ ಮತ್ತು ಹಂಚಿಕೆ ಮಾಡಿದ ಐಟಿ ನಿವೇಶನಗಳ ಸಂಖ್ಯೆ, ಹುಬ್ಬಳ್ಳಿ-ಧಾರವಾಡ ದಲ್ಲಿ ಐಟಿ ಘಟಕಗಳು ಪ್ರಾರಂಭವಾದ ಸಂಖ್ಯೆ, ಅವಳಿ ನಗರದಲ್ಲಿ ಐಟಿ ವ್ಯವಹಾರದ ಪ್ರಮಾಣ, ಐಟಿ ರಫ್ತು ಮತ್ತು ಐಟಿ ಉದ್ಯಮವು ಒದಗಿಸಿದ ಉದ್ಯೋಗದ ಬಗ್ಗೆ ಮತ್ತು ಮುಂದಿನ 5 ವರ್ಷಗಳವರೆಗೆ ಸರ್ಕಾರವು ನಿಗದಿಪಡಿಸಿದ ಗುರಿಗಳು ಕುರಿತು ಸರ್ಕಾರ ಇಲ್ಲಿಯವರೆಗೆ ಯಾವುದೇ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಇದು ಹುಬ್ಬಳ್ಳಿ-ಧಾರವಾಡವನ್ನು ಐಟಿ ತಾಣವಾಗಿ ಅಭಿವೃದ್ಧಿಪಡಿಸುವ ಸರ್ಕಾರದ ಘೋಷಿತ ಉದ್ದೇಶದ ಮತ್ತು ‘ಬಿಯಾಂಡ್ ಬೆಂಗಳೂರು’ ಯೋಜನೆಯ ಕುರಿತು ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ.
ಇನ್ಫೋಸಿಸ್ ಕಾರ್ಯಾರಂಭ ಆದರೆ ಉತ್ತರ ಕರ್ನಾಟಕದ ಸರಿಸುಮಾರು ಮೂರುವರೆ ಸಾವಿರ ಜನರಿಗೆ ನೇರ ಉದ್ಯೋಗ ಸಿಕ್ಕರೆ, ಅವಳಿ ನಗರದ ಸಾವಿರಾರು ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರಕುವ ಅವಕಾಶವಿದೆ. ಆದ್ದರಿಂದ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಂಪನಿಯ ಕೆಲಸ ಪ್ರಾರಂಭದ ಬಗ್ಗೆ ಸರಕಾರ ನಡೆಸಿದ ಪ್ರಯತ್ನದ ಬಗ್ಗೆ ನಿಖರ ಮಾಹಿತಿಯನ್ನು ಹಂಚಿಕೊಂಡು, ಇನ್ಫೋಸಿಸ್ ನ ಕಾರ್ಯಾರಂಭ ಮಾಡುವ ದಿನಾಂಕ ಘೋಷಿಸಿದರೆ ಮಾತ್ರ ಅದು ವಿಶ್ವಾಸಾರ್ಹ ಬೆಳವಣಿಗೆ ಆಗುವುದು. ಇಲ್ಲವಾದಲ್ಲಿ ಮಾನ್ಯ ಸಚಿವರ ಹೇಳಿಕೆಯನ್ನು ಜನರು ನಂಬುವುದು ಹೇಗೆ ಎಂಬುದೇ ದೊಡ್ಡ ಸವಾಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸಂತೋಷ ನರಗುಂದ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಕಾಸ ಸೊಪ್ಪಿನ, ವೀರಣ್ಣ ಮಾಗನೂರ, ಶಶಿಕುಮಾರ್ ಸುಳ್ಳದ, ಪ್ರತಿಭಾ ದಿವಾಕರ ಉಪಸ್ಥಿತದ್ದರು.