ಬೆಳಗ್ಗೆಯಿಂದ ಬಸ್ ಸಂಚಾರ ಆರಂಭ- ಬಹುತೇಕ ಕಡೆ ರೈ ರಯಾ
ಧಾರವಾಡ: ಮುಖ್ಯಮಂತ್ರಿಗಳ ನಿರ್ದೇಶನದಂತೆ ರಾಜ್ಯದಾದ್ಯಂತ ಲಾಕ್ ಡೌನ್ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬೆಳಿಗ್ಗೆಯಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ಎಲ್ಲ ಬಸ್ ಘಟಕಗಳು ಹಾಗೂ ಬಸ್ ನಿಲ್ದಾಣಗಳಿಂದ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಾಗುತ್ತದೆ. ಹುಬ್ಬಳ್ಳಿಯ ಹಳೆಯ ಬಸ್ ನಿಲ್ದಾಣ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ, ಕಲಘಟಗಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಹಾಗೂ ಮತ್ತಿತರ ಬಸ್ ನಿಲ್ದಾಣಗಳಿಂದ ಪ್ರಯಾಣಿಕರ ಬೇಡಿಕೆಗನುಗುಣವಾಗಿ ವಿವಿಧ ಮಾರ್ಗಗಳಲ್ಲಿ ಬಸ್ಸುಗಳನ್ನು ಕಾರ್ಯಚರಣೆ ಮಾಡಲಾಗುತ್ತದೆ ಎಂದು ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ವಿಭಾಗದ ವ್ಯಾಪ್ತಿಯ ಎಲ್ಲಾ ಬಸ್ ಘಟಕಗಳು, ಬಸ್ಸುಗಳು ಮತ್ತು ಬಸ್ ನಿಲ್ದಾಣಗಳನ್ನು ಈಗಾಗಲೇ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ. ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಿ ಸ್ಯಾನಿಟೈಜೇಷನ್ ಮಾಡಲಾಗಿರುತ್ತದೆ.
ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಬಸ್ಸುಗಳನ್ನು ರಸ್ತೆಗಿಳಿಸಲಾಗುತ್ತದೆ. ಮಾಸ್ಕ್ ಧರಿಸಿದ ಪ್ರಯಾಣಿಕರಿಗೆ ಮಾತ್ರವೇ ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ನಿಲ್ದಾಣದ ಪ್ರವೇಶದ್ವಾರದಲ್ಲಿ ಎಲ್ಲಾ ಪ್ರಯಾಣಿಕರಿಗೆ ಸ್ಯಾನಿಟೈಜರ್ ನೀಡಲಾಗುತ್ತದೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಆದ್ದರಿಂದ ಪ್ರಯಾಣಿಕರು ಯಾವುದೇ ಆತಂಕವಿಲ್ಲದೆ ಸಂಸ್ಥೆಯ ಬಸ್ಸುಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ರಾಮನಗೌಡರ ವಿವರಿಸಿದ್ದಾರೆ
