ಶ್… ಸದ್ದು…!!! ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ- ಜಿಪಂ, ತಾಪಂ ಚುನಾವಣೆ ಆಗೇ ಆಗತ್ತೆ…!!!!
1 min readಕರ್ನಾಟಕದಲ್ಲಿ ಇನ್ನೂ ನಡೆಯದ ಜಿಲ್ಲಾ ಪಂಚಾಯತ ಮತ್ತು ತಾಲೂಕು ಚುನಾವಣೆ
ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಚುನಾವಣೆಗಳು ನಡೆಯದೇ ಇರುವುದು ಪ್ರಜಾಪ್ರಭುತ್ವವನ್ನ ಲೇವಡಿ ಮಾಡಿದಂತಾಗುತ್ತಿದೆ ಎಂಬ ಮನೋಭಾವನೆ ಸಾಮಾನ್ಯರಲ್ಲಿ ಮೂಡ ಬರತೊಡಗಿದೆ.
2021 ರ ಏಪ್ರಿಲ್‌ನಲ್ಲಿ ಚುನಾವಣೆಗಳು ನಡೆಯಬೇಕಾಗಿತ್ತು. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಇದ್ದಾಗ ಇನ್ನೇನು ಚುನಾವಣೆಗಳು ನಡೆದೇ ಬಿಟ್ಟವು ಎಂದು ಹೇಳಲಾಗಿತ್ತಾದರೂ, ಚುನಾವಣೆಗಳು ಕೇವಲ ಶಾಸಕರ ಗೆಲುವು ಸೋಲಿಗೆ ಸಿಮೀತವಾಗಿತ್ತು.
ಕಾಂಗ್ರೆಸ್ ಸರಕಾರ ಬಂದ ನಂತರವೂ ಇದೇ ಪರಿಸ್ಥಿತಿ ಮುಂದುವರೆದಿದೆ. ಕ್ಷೇತ್ರಗಳ ಮರು ವಿಂಗಡಣೆಯ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ತಾಲ್ಲೂಕು ಪಂಚಾಯಿತಿ (TP) ಮತ್ತು ಜಿಲ್ಲಾ ಪಂಚಾಯಿತಿಗಳಿಗೆ (ZP) ಚುನಾವಣೆ ನಡೆಸಲು ಆಕ್ಷೇಪಣೆಗಳನ್ನು ಆಹ್ವಾನಿಸುವ ಕರಡು ಮೀಸಲಾತಿ ಅಧಿಸೂಚನೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸುವುದಾಗಿ ರಾಜ್ಯ ಸರ್ಕಾರ ಡಿಸೆಂಬರ್‌ನಲ್ಲಿ ಹೈಕೋರ್ಟ್ ಗೆ ತಿಳಿಸಿತ್ತು.
2021ರಲ್ಲಿ ರಾಜ್ಯ ಚುನಾವಣಾ ಆಯೋಗವು (SEC) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು ಇದನ್ನು ಪರಿಗಣಿಸುವುದಾಗಿ ಹೇಳಿತ್ತು.
ಒಂದು ವಾರದಲ್ಲಿ ಹೊರಡಿಸಲಿರುವ ಕರಡು ಮೀಸಲಾತಿ ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸ್ವೀಕರಿಸುವ ಪ್ರಕ್ರಿಯೆ ಮುಗಿದ ಎರಡು ವಾರಗಳ ನಂತರ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆಯನ್ನು ಅಂತಿಮಗೊಳಿಸಲಾಗುವುದು ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟಿಗೆ ವಿವರ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಅವಧಿ ಮುಗಿದು ಮೂರು ವರ್ಷಗಳಾಗಿವೆ. 2021ರ ಏಪ್ರಿಲ್‌ನಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಅವಧಿ ಮುಗಿದಿದ್ದರೂ ಚುನಾವಣೆ ನಡೆದಿರಲಿಲ್ಲ. ರಾಜ್ಯ ಸರ್ಕಾರ ವಿವಿಧ ಕಾರಣಗಳಿಂದ ಚುನಾವಣೆಯನ್ನು ಮುಂದೂಡತ್ತಲೇ ಬಂದಿದೆ. ಈಗ ಹೊಸ ಸರ್ಕಾರ ಬಂದ ಬೆನ್ನಲ್ಲಿಯೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಮತದಾರರ ಪಟ್ಟಿ, ಮತ ಕೇಂದ್ರಗಳ ಸಿದ್ಧತೆಗೆ ಸೂಚಿಸಿತ್ತು. ಆದರೆ, ಅದು ಕೂಡಾ ಗಗನ ಕುಸುಮವಾಗುತ್ತಿದೆ.
ಕಳೆದ ಆರೆಂಟು ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಕಾಂಕ್ಷಿಗಳು, ತನಗೆ ಟಿಕೆಟ್ ಸಿಗತ್ತೆ ಎಂದುಕೊಂಡು ತಾವಿರುವ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದ್ದರು. ಅದೇ ಆಕಾಂಕ್ಷಿಗಳು ಈಗ ಲೋಕಸಭೆ ಚುನಾವಣೆಯಲ್ಲಿ ಮತ ಕೇಳುವುದಕ್ಕೆ ಮುಂದಾಗುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗಂಟೆಗಟ್ಟಲೇ ಮಾತನಾಡುವ ಮಹಾನುಭಾವರು ಸ್ಥಳೀಯ ಮುಖಂಡರನ್ನ ಬೆಳೆಸುವ ಮತ್ತೂ ಆ ಮೂಲಕ ಅಭಿವೃದ್ಧಿಯನ್ನ ಹೆಚ್ಚಿಸುವುದಕ್ಕೆ ಮುಂದಾಗದೇ ಇರುವುದು ಅಚ್ಚರಿಯೇ ಸರಿ.
ಪಕ್ಷಗಳ ಆಕಾಂಕ್ಷಿಗಳಾದರೂ ತಮ್ಮ “ಗಾಣದೆತ್ತಿನ” ಸ್ಥಿತಿಯನ್ನ ತಿಳಿದುಕೊಳ್ಳದ ರೀತಿಯಲ್ಲಿ ವರ್ತನೆ ಮಾಡುತ್ತಿರುವುದು ಅವರಲ್ಲಿನ ಅಧಿಕಾರದ ಹಪಾಹಪಿಯನ್ನ ತೋರಿಸುತ್ತಿದೆ. ಈ ಮೂಲಕವೂ ಪ್ರಜಾಪ್ರಭುತ್ವದ ಕಲ್ಪನೆ ಕಡಿಮೆಯಾದಂತೆ ಕಾಣುತ್ತಿದೆ, ಅಲ್ಲವೇ…!?