ರಾಜ್ಯದಲ್ಲಿ 110 ಜಿಪಂ ಕ್ಷೇತ್ರ ಹೆಚ್ಚಳ- 600 ತಾಪಂ ಕ್ಷೇತ್ರ ರದ್ದು…!
1 min readಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬೆನ್ನಹಿಂದೆಯೇ ಮತ್ತೊಂದು ಚುನಾವಣಾ ಸಮರಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗಬೇಕಿದೆ. ಈ ಸಲ 110 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹೆಚ್ಚಾಗಲಿವೆ, ಅಲ್ಲದೆ, ಸುಮಾರು 600 ತಾಲೂಕು ಪಂಚಾಯಿತಿ ಕ್ಷೇತ್ರಗಳು ರದ್ದಾಗಲಿವೆ.
ರಾಜ್ಯ ಚುನಾವಣಾ ಆಯೋಗ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಮಾರ್ಗಸೂಚಿ ಹೊರಡಿಸಿದ್ದು, ಈ ಮಾರ್ಗಸೂಚಿ ಅನ್ವಯ ಕ್ಷೇತ್ರ ಪುನರ್ ವಿಂಗಡಣೆಯಾಗಲಿದೆ. ಈಗಾಗಲೇ ಆಯಾ ಜಿಲ್ಲಾಧಿಕಾರಿಗಳು ಪುನರ್ ವಿಂಗಡಣೆಯ ಮಾಹಿತಿ ಹಾಗೂ ನಕ್ಷೆಗಳನ್ನು ಫೆ.19, 20 ಮತ್ತು 22ರಂದು ಆಯೋಗಕ್ಕೆ ಹಾಜರು ಪಡಿಸಿದ್ದಾರೆ.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದು, ಈ ಪ್ರಕ್ರಿಯೆ ಮೊದಲ ಹಂತ ಸೋಮವಾರ ಪೂರ್ಣಗೊಂಡಿದೆ. ಇದೇ ವಾರಾಂತ್ಯದಲ್ಲಿ 2ನೇ ಹಂತದ ಪರಿಶೀಲನೆ ಪೂರ್ಣಗೊಳಿಸಲು ನಿರ್ಧರಿಸಿದೆ. 2ನೇ ಹಂತದ ಪ್ರಕ್ರಿಯೆ ಕೂಡ ಇದೇ ವಾರದಲ್ಲಿ ಪೂರ್ಣಗೊಳಿಸಲು ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಕ್ಷೇತ್ರದ ಮಾಹಿತಿ ಮತ್ತು ನಕ್ಷೆ ಪೂರ್ಣಗೊಂಡ ಬಳಿಕ ಅಧಿಸೂಚನೆ ಹೊರಡಿಸಲಾಗುತ್ತೆ.
ತಾಲೂಕು ಪಂಚಾಯಿತಿ ಕ್ಷೇತ್ರಗಳ ಜನಸಂಖ್ಯೆ ಪ್ರಮಾಣವನ್ನು 10 ಸಾವಿರದಿಂದ 12,500ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜನಸಂಖ್ಯೆ ಪ್ರಮಾಣವನ್ನು 40 ಸಾವಿರದಿಂದ 35 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹೆಚ್ಚಾದರೆ, ಸುಮಾರು 600 ತಾಲೂಕು ಪಂಚಾಯಿತಿ ಕ್ಷೇತ್ರಗಳು ರದ್ದಾಗಲಿವೆ.
ಮೇ, ಜೂನ್ ಅವಧಿ ಪೂರ್ಣ: ಕೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಮೀಸಲಾತಿ ಪ್ರಕಟಿಸಲಾಗುತ್ತದೆ. ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡ 45 ದಿನಗಳ ಬಳಿಕ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅವಧಿ ಪೂರ್ಣಗೊಳ್ಳಲಿದ್ದು, ರಾಜ್ಯ ಚುನಾವಣಾ ಆಯೋಗ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ.