ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ಸೆಲಿಬ್ರಿಟಿಗಳ ನಡುವೆ ಖಾಲಿದ್ ಮತ್ತು ಭವ್ಯ ಎಂಬೆರಡು ಆಶಾಕಿರಣಗಳು…!
ಬೆಂಗಳೂರು: ಆಂತರಿಕ ಪ್ರಜಾಪ್ರಭುತ್ವ ಎಂಬುದು ಕಾಂಗ್ರೆಸ್ ಪಕ್ಷದ ಪರಂಪರಾಗತ ಸಿದ್ದಾಂತಗಳಲ್ಲೊಂದು. ಹಣಬಲ, ತೋಳ್ಬಲ, ಜಾತಿ ಹಾಗೂ ಸಾಮುದಾಯಿಕ ಬಲವಿದ್ದವರಷ್ಟೆ ರಾಜಕೀಯ ಪಕ್ಷಗಳ ಮುಂದಾಳತ್ವವನ್ನು ವಹಿಸಿಕೊಳ್ಳಬೇಕೆಂಬುದನ್ನು ತೊಡೆದು ಹಾಕಲಿಕ್ಕಾಗಿಯೇ ಕಾಂಗ್ರೆಸ್ ಪಕ್ಷ ತನ್ನೆಲ್ಲ ಘಟಕಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಜೀವಂತವಾಗಿಟ್ಟಿದೆ. ಇದರ ಭಾಗವಾಗಿಯೇ ದೇಶಾದ್ಯಂತ ಯುವ ಕಾಂಗ್ರೆಸ್ ಘಟಕದ ಪದಾಧಿಕಾರತ್ವಕ್ಕೆ ಚುನಾವಣೆಯನ್ನು ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ರಾಜ್ಯಾದ್ಯಂತ ಜನವರಿ 10 ಮತ್ತು 11 ಹಾಗೂ 12 ರಂದು ಮೂರು ಹಂತಗಳಲ್ಲಿ ಯುವ ಕಾಂಗ್ರೆಸ್ಸಿನ ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆಗಳು ನಿಗದಿಗೊಂಡಿವೆ. ಹಣಬಲ, ತೋಳ್ಬಲ ಹಾಗೂ ಸೆಲೆಬ್ರಿಟಿಗಳ ಕರಿನೆರಳು ಈಗಿನ ಯುವ ಕಾಂಗ್ರೆಸ್ ಚುನಾವಣೆಯನ್ನು ಕೂಡ ಆಕ್ರಮಿಸಿರುವುದು ಸುಳ್ಳೇನಲ್ಲ.
ಈಗಾಗಲೇ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ, ಮಾಜಿ ಮಂತ್ರಿ ಎನ್.ಆರ್ .ಸೀತಾರಾಂ ಪುತ್ರ ರಕ್ಷಾ ರಾಮಯ್ಯ, ಮಹಾಲಕ್ಷ್ಮಿ ಲೇಔಟ್ 2018ರ ಪರಾಜಿತ ಅಭ್ಯರ್ಥಿ ಹೆಚ್.ಎಸ್.ಮಂಜುನಾಥ, ಮಾಜಿ ಮಂತ್ರಿ ರಮಾನಾಥ ರೈ ಪುತ್ರ ಮಿಥುನ್ ರೈ ರಂತಹ ರಾಜಕೀಯ ಹಿನ್ನೆಲೆಯುಳ್ಳ ಹಾಗೂ ಸಾಮಾಜಿಕವಾಗಿ ಸಂತೃಪ್ತಿ ಹೊಂದಿರುವ ಸೆಲೆಬ್ರಿಟಿಗಳು ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಸ್ಪರ್ಧೆಗಿಳಿದಿದ್ದಾರೆ. ಇವರುಗಳ ಮಧ್ಯೆ ಮಧ್ಯ ಕರ್ನಾಟಕದ ಬೆಣ್ಣೆ ನಗರಿ ದಾವಣಗೆರೆಯ ಸೈಯ್ಯದ್ ಖಾಲಿದ್ ಅಹಮದ್ ಹಾಗೂ ಭವ್ಯ.ಕೆ.ಆರ್ ಎಂಬಿಬ್ಬ ಹಿಂದುಳಿದ ವರ್ಗಗಳಿಂದ ಬಂದವರು ರಾಜ್ಯ ಯುವ ಕಾಂಗ್ರೆಸ್ಸಿನ ಚುನಾವಣಾ ಕಣದಲ್ಲಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಧಿಕಾರ ರಾಜಕಾರಣದ ನೆರಳಲ್ಲಿ ಬೆಳೆದು ಅದರ ಬೆಂಬಲದಲ್ಲಿ ಸಾಮಾಜಿಕ ಐಡೆಂಟಿಟಿಯನ್ನು ಕೂಡ ಪಡೆದಿರುವ ಸೆಲಿಬ್ರಿಟಿಗಳ ನಡುವೆ, ಖಾಲಿದ್ ಹಾಗೂ ಭವ್ಯ ರವರಂತಹ ಸಾಮಾಜಿಕ ಸಂರಚನೆಯಿಂದ ಬಹುದೂರವಿರುವ ನೆಲೆಗಟ್ಟಿನಿಂದ ಬಂದು ಯುವ ಕಾಂಗ್ರೆಸ್ ಚುನಾವಣಾ ಕಣದಲ್ಲಿ ತಮ್ಮ ಅಭಿಮತ ಸ್ಥಾಪಿಸಿದ್ದಾರೆ.
ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ನಂತರ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಸಂಚಾಲಕರಾಗಿ ದೇಶದ ವಿವಿಧ ರಾಜ್ಯ ಗಳಾದ ಗೋವಾ, ತೆಲಂಗಾಣ, ಗುಜರಾತ್, ದೆಹಲಿ ಸೇರಿದಂತೆ ಮತ್ತಿತರ ರಾಜ್ಯಗಳ ಚುನಾವಣೆಯಲ್ಲಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಸೈಯ್ಯದ್ ಖಾಲಿದ ಅಹಮದ ರವರಿಗಿದ್ದರೆ, ಬೆಂಗಳೂರಲ್ಲಿದ್ದುಕೊಂಡು ರಾಜ್ಯ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ, ನಂತರ ತನ್ನ ಕಾರ್ಯವೈಖರಿಯ ಮೂಲಕದಿಂದಲೇ ರಾಜ್ಯ ಯುವ ಕಾಂಗ್ರೆಸ್ಸಿನ ಉಪಾಧ್ಯಕ್ಷೆಯಾಗಿ ಪದೋನ್ನತಿ ಹೊಂದಿದ ಕೀರ್ತಿ ಭವ್ಯ.ಕೆ.ಆರ್ ರವರಿಗಿದೆ. ಅಧಿಕಾರ ರಾಜಕಾರಣವೆಂಬ ಅತಿ ಮಾನುಷ ಶಕ್ತಿಯಿಂದ ದೂರವಿರುವ ಈ ಎರಡೂ ಅಭ್ಯರ್ಥಿಗಳಿಗೆ ಯಾವ ದೊಡ್ಡ ಶಕ್ತಿಯ ಬೆಂಬಲವಿಲ್ಲ. ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಯುವ ಕಾಂಗ್ರೆಸ್ಸಿನ ಹುಮ್ಮಸ್ಸು ಈರ್ವರಲ್ಲಿ ಮನೆ ಮಾಡಿರುವ ಕಾರಣಕ್ಕೆ ಯಾರ ಹಂಗಿಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರೆಂಬಂತೆ ಯುವ ಕಾಂಗ್ರೆಸ್ ಚುನಾವಣೆಯ ಕಣದಲ್ಲಿ ತಮ್ಮ ಅಸ್ತಿತ್ವ ಹುಡುಕಲು ಪ್ರಯತ್ನಿಸುತ್ತಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ ಪಕ್ಷ ಸಂಕ್ರಮಣದ ಸಂಕಟದಲ್ಲಿದೆ. ಹಣ, ಜಾತಿ, ವ್ಯವಹಾರಿಕ ಮಾನದಂಡಗಳ ಆಧಾರದಮೇಲೆ ಅವರಿವರನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿದ ತಪ್ಪಿಗೆ ಕಾಂಗ್ರೆಸ್ ಪಕ್ಷ ತನ್ನ ಸಂಘಟನಾ ಸಾಮರ್ಥ್ಯ ಕುಂದಿಸಿಕೊಂಡಿದೆ. ಅವಕಾಶವಾದಿ ರಾಜಕಾರಣದಿಂದಾಗಿ ಸೈದ್ದಾಂತಿಕ ದೃಷ್ಟಿಕೋನದಿಂದ ಸೋತು ಹೋಗಿದೆ. ಈ ಹೊತ್ತಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಕ್ಸಿಜನ್ ಒದಗಿಸುತ್ತಿರುವುದು ಸಾಮಾನ್ಯ ಕಾರ್ಯಕರ್ತರೇ ಹೊರತು ಅಧಿಕಾರ ಉಂಡು ತನಗೆ ತನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಆಸ್ತಿ ಮಾಡಿಟ್ಟಿರುವ ಹಾಲಿ-ಮಾಜಿ ನಾಯಕರಲ್ಲ. ಈ ಹೊತ್ತಿಗಾದರೂ ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ, ಪಕ್ಷದ ಸಿದ್ದಾಂತವನ್ನು ಪ್ರಾಮಾಣಿಕವಾಗಿ ಉಸಿರಾಡುತ್ತಿರುವ, ರಾಜಕೀಯ ಧ್ವನಿಯಿಲ್ಲದೇ ಎಲೆ ಮರೆಯ ಕಾಯಿಯಂತೆ ಬೂತ್ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿ ಸಂಘರ್ಷ ಎದುರಿಸುತ್ತಿರುವ ಯುವ ಪಡೆಯನ್ನು ಗುರುತಿಸುವ ಹೊಣೆಗಾರಿಕೆ ಪ್ರದರ್ಶಿಸಬೇಕಿದೆ.
ತಾಲ್ಲೂಕು ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಯುವ ಕಾಂಗ್ರೆಸ್ಸನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಕಾಳಜಿ ಹೊಂದಿರುವ ನಾಯಕತ್ವದ ಗುಣಗಳನ್ನು ಹೊಂದಿರುವ ಸೈಯ್ಯದ್ ಖಾಲಿದ್ ಅಹಮದ್ ಹಾಗೂ ಭವ್ಯ.ಕೆ.ಆರ್ ರಂತಹ ಪ್ರತಿಭೆಗಳಿಗೆ ಮನ್ನಣೆ ನೀಡಬೇಕಿದೆ.
ಕೋವಿಡ್ -19 ಎಂಬ ಹೆಮ್ಮಾರಿಯ ಕಾರಣಕ್ಕೆ ಇದೆ ಜನವರಿ 10,11 ಹಾಗೂ 12, 2021 ರಿಂದ ಮೂರು ದಿನಗಳ ಕಾಲ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಜನವರಿ 12, 2021ರಂದು ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ಯುವ ಕಾಂಗ್ರೆಸ್ ವೆಬ್ ಪೋರ್ಟಲ್ ಮೂಲಕ ಯುವ ಕಾಂಗ್ರೆಸ್ಸಿಗೆ ಮತದಾನ ಜರುಗಲಿದೆ.
ಯಾವುದೇ ಪ್ರಭಾವಿ ಮುಖಂಡರ ಕೃಪೆ ಇಲ್ಲದೆ ನಿಷ್ಠಾವಂತ ಕಾರ್ಯಕರ್ತ ರನ್ನು ನಂಬಿ ಈ ಚುನಾವಣೆ ಯಲ್ಲಿ ಸ್ಪರ್ಧಿಸುತ್ತಿರುವ ಖಾಲಿದ್ ಹಾಗೂ ಭವ್ಯ.ಕೆ. ಆರ್ ರವರುಗಳು, ಪ್ರಭಾವಿ ರಾಜಕಾರಣಿಗಳ ಮಕ್ಕಳ ಎದುರು ಸ್ಪರ್ಧೆಗಿಳಿದಿದ್ದಾರೆ. ಇಂತಹ ಪ್ರಾಮಾಣಿಕ ಹಾಗೂ ಸಜ್ಜನಿಕೆಯುಳ್ಳವರನ್ನು ಯುವ ಕಾಂಗ್ರೆಸ್ಸಿನ ಮತದಾರರು ಆಯ್ಕೆ ಮಾಡಿಕೊಂಡರೆ ಅವರ ಮತಗಳಿಗೂ ಕೂಡ ಘನತೆ ದಕ್ಕುವುದರಲ್ಲಿ ಯಾವುದೇ ಸಂದೇಹಗಳಿಲ್ಲ.

