Karnataka Voice

Latest Kannada News

ಸೆಟ್ಟೇರಿದ ಯೋಗಿ “ಲೂಸ್ ಮಾದ” ಸಿನಿಮಾ… ಕರಾವಳಿ ಭಾಗದಲ್ಲಿ ನಡೆಯುವ ಭೂಗತ ಜಗತ್ತಿನ ಕತೆ…

Spread the love

ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ “ದುನಿಯಾ” ಚಿತ್ರದಲ್ಲಿ “ಲೂಸ್ ಮಾದ” ಎಂಬ ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ಪಾತ್ರಕ್ಕೆ ನೋಡುಗರು ಫಿದಾ ಆದರು ಅಂದಿನಿಂದಲೂ “ಲೂಸ್ ಮಾದ” ಯೋಗೇಶ್ ಅಂತಲೇ ಯೋಗೇಶ್ ಜನಪ್ರಿಯರಾದರು. ಈಗ “ಲೂಸ್ ಮಾದ” ಚಿತ್ರದ ಶೀರ್ಷಿಕೆಯಾಗಿದೆ. ಈ ಚಿತ್ರದ ನಾಯಕನಾಗಿ ಯೋಗೇಶ್ ಅವರೆ ಅಭಿನಯಿಸುತ್ತಿದ್ದಾರೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಯೋಗೇಶ್ ಅವರ ತಂದೆ, ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರದ ನಿರ್ಮಾಪಕ ಧರ್ಮೇಂದ್ರ ಅವರೆ ಕ್ಯಾಮೆರಾ ಚಾಲನೆ ಮಾಡಿದರು. ಉದಯ್ ಶೆಟ್ಟಿ, ಉಮೇಶ್ ಶೆಟ್ಟಿ, ರಘು ಗುಜ್ಜಲ್ ಮುಂತಾದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಯೋಗೇಶ್ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ಸಿನಿಮಾ ಮುಹೂರ್ತದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

ನಿರ್ಮಾಪಕ ಧರ್ಮೇಂದ್ರ ಮಾತನಾಡಿ, ‘ನಾನು ಮೂಲತಃ ಮಂಗಳೂರಿನವನು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್. ಎಂದು ಮಾತನಾಡಿದ ನಿರ್ಮಾಪಕ ಧರ್ಮೇಂದ್ರ, ಸಿನಿಮಾರಂಗ ನನಗೆ‌ ಹೊಸತು. ಕೆಲವು ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿ ಅಂತ ಹೇಳಿದರು. ನಿರ್ದೇಶಕರು ಹೇಳಿದ ಕಥೆಯೂ ಇಷ್ಟವಾಯಿತು. ಜೊತೆಗೆ ನಾನು ಲೂಸ್ ಮಾದ ಯೋಗೇಶ್ ಅವರ ಅಭಿಮಾನಿ. ಅವರೆ ನಮ್ಮ ಚಿತ್ರದ ನಾಯಕರಾಗಿರುವುದು ಖುಷಿಯಾಗಿದೆ. ಇಂದಿನ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು.

ನಿರ್ದೇಶಕ ರಂಜಿತ್‌ ಕುಮಾರ್‌ ಗೌಡ ಅವರಿಗೆ ಇದು ಮೂರನೇ ಸಿನಿಮಾ. ‘ಈ ಚಿತ್ರಕ್ಕೆ ”The Wolf” ಎಂಬ ಅಡಿಬರಹವಿದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದೆ. ಯೋಗೇಶ್ ಅವರು ಹಲವು ವರ್ಷಗಳ ಪರಿಚಯ. ಅವರಿಗೆ ಈ ಚಿತ್ರದ ಕಥೆ ಹೇಳಿದೆ. ನಾಯಕನಾಗಿ ನಟಿಸಲು ಒಪ್ಪಿಕೊಂಡರು. ಧರ್ಮೇಂದ್ರ ಅವರು ನಿರ್ಮಾಣಕ್ಕೆ ಮುಂದಾದರು. ಎಲ್ಲಾ ಪ್ರಾಣಿಗಳಿಗಿಂತ ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಅಂಜದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ’ ಎನ್ನುತ್ತಾರವರು. ಕಿಶೋರ್‌, ಆದಿ ಲೋಕೇಶ್‌, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶಶಾಂಕ್‌ ಶೇಷಗಿರಿ ಸಂಗೀತ, ಪ್ರದೀಪ್‌ ರೆಡ್ಡಿ ಛಾಯಾಗ್ರಹಣ, ರಂಜನ್‌ ಸಂಕಲನ ಚಿತ್ರಕ್ಕಿರಲಿದೆ.


Spread the love

Leave a Reply

Your email address will not be published. Required fields are marked *