Rocking Star ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಟ್ರೇಲರ್ ಬಿಡುಗಡೆ…
ನ್ಯಾಷನಲ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಪೃಥ್ವಿ ಅಂಬರ್ ಮತ್ತು ಕಾವ್ಯ ಶೈವ ನಟಿಸಿದ್ದಾರೆ
ಬಹುನಿರೀಕ್ಷಿತ ‘ಕೊತ್ತಲವಾಡಿ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ‘ಕೊತ್ತಲವಾಡಿ’ ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ರಾಜಕೀಯ ದಂಗಲ್, ಪೊಲೀಸ್ ವ್ಯವಸ್ಥೆ, ಅವಕಾಶವಾದಿತನ, ನಾಯಕನ ಹೋರಾಟದ ಸುತ್ತ ಸಿನಿಮಾ ಸಾಗುತ್ತದೆ. ಹಳ್ಳಿ ಹೈದನಾಗಿ ಪೃಥ್ವಿ ಅಂಬರ್ ರಗಡ್ ಅವತಾರ ತಾಳಿದ್ದು, ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ ಅದ್ಭುತ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಪುಷ್ಪ ಅರುಣ್ ಕುಮಾರ್, ‘ಆಗಸ್ಟ್ 1ಕ್ಕೆ ಸಿನಿಮಾ ಬರ್ತಿದೆ. ಜನ ಈ ಚಿತ್ರ ಹೇಗೆ ತೆಗೆದುಕೊಳ್ತಾರೋ ಎಂಬ ಭಯವಿದೆ. ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಸೆಲೆಬ್ರಿಟಿ ಮನೆಯವರಾಗಿ ಭಯ ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್ಗೆ ಏನೋ ಹೇಳದೇ ಮಾಡಿಲ್ಲ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ, ನಮಗೂ ಖುಷಿ. ಬೇರೆ ದೊಡ್ಡಸ್ತಿಕೆ ಇದರಲ್ಲಿ ಇಲ್ಲ’ ಎನ್ನುತ್ತಾರೆ.

ನಿರ್ದೇಶಕ ಶ್ರೀರಾಜ್, ‘ಖುಷಿ ಅನ್ನೋವುದಕ್ಕಿಂತ ಇದು ಜವಾಬ್ದಾರಿ. ಆಡಿಯನ್ಸ್ ನೋಡಿ ಚಿತ್ರಕ್ಕೆ ಪ್ರತಿಕ್ರಿಯೆ ಕೊಡಬೇಕು. ಈ ಕಥೆ ಶುರುವಾದಾಗ ಪುಷ್ಪ ಅಮ್ಮನಲ್ಲಿ ಚರ್ಚೆ ಮಾಡಿದೆ. ಯಾವುದಕ್ಕೂ ಕಾಂಪ್ರಮೈಸ್ ಆಗಬೇಡ. ನಿನಗೆ ಏನೂ ಬೇಕೋ ಅದು ತೆಗೆದುಕೊಳ್ಳು ಎನ್ನುತ್ತಿದ್ದರು. ಇವತ್ತು ನೀವು ನೋಡುತ್ತಿರುವ ಕ್ವಾಲಿಟಿ, ಕಂಟೆಂಟ್ ಕಾರಣ ಪುಷ್ಪ ಅಮ್ಮ. ಈ ರೀತಿ ನಿರ್ಮಾಪಕರು ಕನ್ನಡ ಇಂಡಸ್ಟ್ರೀಗೆ ಬೇಕು’ ಎನ್ನುತ್ತಾರೆ. ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರೊಡಕ್ಷನ್ ಹಾಡು ಹಾಗೂ ಹಿನ್ನಲೆ ಸಂಗೀತವನ್ನು ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ ಮತ್ತು ಗೌಸ್ ಪಿರ್ ಗೀತಸಾಹಿತ್ಯ ಚಿತ್ರಕ್ಕಿದೆ.
