ದರೋಡೆಗಿಳಿದಿದೆ ನಟೋರಿಯಸ್ ಮಹಿಳಾ ತಂಡ- ನಿಮ್ಮೂರಿಗೂ ಬಂದಾರು ಹುಷಾರ್…!
ವಿಜಯಪುರ: ಫ್ಲೋರ್ ಕ್ಲೀನಿಂಗ್ ಫಿನಾಯಿಲ್ ಮಾರಾಟ ನೆಪದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆಯೊಬ್ಬರ ಮನೆ ದರೋಡೆ ಮಾಡಿರುವ ಘಟನೆ ವಿಜಯಪುರದ ಶಾಂತಿನಗರದಲ್ಲಿ ನಡೆದಿದೆ.
ಸುನಂದಾ ತೋಳಬಂದಿ ಎಂಬುವರ ಮನೆಯಲ್ಲಿ ದರೋಡೆಯಾಗಿದ್ದು, ಸುನಂದಾ ಹಾಗೂ ಅವರ ಪತಿ ವಾಸುದೇವ, ಮಗ ಕೇಶವ ತೋಳಬಂದಿಗೆ ಮಂಪರು ಪಡಿಸಿ ದರೋಡೆ ಮಾಡಿದ್ದಾರೆ.
ತೋಳಬಂದಿ ಮಗ ಹೊರಗಡೆ ಬಂದಾಗ ಬೇಡವೆಂದರೂ ವಾಸನೆ ನೋಡಿ ಎಂದು ತೋರಿಸಿದ ಯುವತಿ ಆ್ಯಂಡ್ ಗ್ಯಾಂಗ್ ಮನೆಯಲ್ಲಿದ್ದ 40 ಗ್ರಾಂ ಚಿನ್ನ, 220 ಗ್ರಾಂ ಬೆಳ್ಳಿಯ ಸುಮಾರು 2.20 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಇನ್ನು ತೋಳಬಂದಿ ಅವರ ಮನೆಯ ನಾಯಿಗೂ ವಿಷವುಣಿಸಿ ಹತ್ಯೆಗೈದಿದ್ದಾರೆ.
ಈ ಕುರಿತು ವಿಜಯಪುರ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚನೆ ಮಾಡಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ ಮಾಹಿತಿ ನೀಡಿದ್ದಾರೆ.