Posts Slider

Karnataka Voice

Latest Kannada News

ಅವಳಿ ನಗರದ ಬಹುದಿನಗಳ ಕನಸು 24X7 ನೀರು ಸರಬರಾಜು ಯೋಜನೆ

1 min read
Spread the love

ಹುಬ್ಬಳ್ಳಿ: ವಿಶ್ವಬ್ಯಾಂಕ್ ನೆರವಿನ 24X7 ನಿರಂತರ ನೀರು ಸರಬರಾಜು ಯೋಜನೆ ಅವಳಿ ನಗರದ ಬಹುದಿನದ ಕನಸಾಗಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು. ಸದ್ಯ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಮಂಡಳಿ, ಪಾಲಿಕೆ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸಿ ನಿರ್ವಹಣೆ ಮಾಡುವ ಎಲ್ ಆ್ಯಂಡ್ ಟಿ ಕಂಪನಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಕಿರಿಯಾಡ್ ಹೋಟಲ್ ನಲ್ಲಿ ಆಯೋಜಿಸಲಾದ 24X7 ನಿರಂತರ ನೀರು ಸರಬರಾಜು ಯೋಜನೆಯ ರೀ-ಲಾಂಚ್ ಕಾರ್ಯಾಗಾರ ಉದ್ಘಾಟಸಿ ಮಾತನಾಡಿದರು.

ರಾಜ್ಯ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆಯಲಾಗಿತ್ತು. ಯೋಜನೆಗೆ ಹಣ ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ ನೀಡಿತು. ಪಾಲಿಕೆ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ನಿಯಮಿತದಿಂದ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ ಅಡಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಆರಂಭದಲ್ಲಿ ಹುಬ್ಬಳಿಯ ಹಾಗೂ ಧಾರವಾಡ 8 ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ 24X7 ನಿರಂತರ ನೀರು ಸರಬರಾಜು ಯೋಜನೆ ಜಾರಿಗೆ ತರಲಾಯಿತು. ನಂತರ ನಗರ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯಿಂದ 115 ಕೋಟಿ ವೆಚ್ಚದಲ್ಲಿ 18 ವಾರ್ಡ್ ಗಳಿಗೆ ಯೋಜನೆ ವಿಸ್ತರಿಸಲಾಯಿತು‌. ಸದ್ಯದ ಯೋಜನೆಗೆ ಕಳೆದ ಸರ್ಕಾರದ ಅವಧಿಯಲ್ಲಿ ಟೆಂಡರೆಯಲಾಯಿತು. ಟೆಂಡರ್ ತೆಗೆದುಕೊಂಡ ಕಂಪನಿ ನಕಾರಾತ್ಮಕ ಹಾಗೂ ಹೆಚ್ಚಿನ ವೆಚ್ಚದ ನೆಪ ಹೇಳಿ ಯೋಜನೆ ಅನುಷ್ಠಾನಗೊಳಿಸಲಿಲ್ಲ. ಇದರಿಂದಾಗಿ ಹೊಸದಾಗಿ ಟೆಂಡರ್ ಕರೆ್ದುದು ಎಲ್ ಆ್ಯಂಡ್ ಟಿ ನಿರ್ಮಾಣ ಸಂಸ್ಥೆ ಯೋಜನೆ ಟೆಂಡರ್ ನೀಡಲಾಯಿತು. ಸಂಸ್ಥೆ ಆಶಾದಾಯಕವಾಗಿ ಕೆಲಸ ಆರಂಭಿಸಿದೆ. ಒಟ್ಟು ಮಹಾನಗರದ 47 ವಾರ್ಡ್ ಗಳಲ್ಲಿಯೂ ಕೂಡ ಯೋಜನೆ ಜಾರಿಗೆ ತರಲಾಗುವುದು.

24X7 ನಿರಂತರ ನೀರು ಸರಬರಾಜು ಯೋಜನೆಗೆ ಒಳಪಡದ ವಾರ್ಡ್ ಗಳ ಮಹಿಳೆಯರು ಯೋಜನೆ ಅನುಷ್ಠಾನದ ಬಗ್ಗೆ ಸದಕಾಲಮನವಿ ಮಾಡುತ್ತಿದ್ದರು. ವಿರೋಧ ಪಕ್ಷದ ನಾಯಕನಿದ್ದಾಗ ವಿಧಾನ ಸಭೆ ಅಧಿವೇಶನದಲ್ಲಿ ಯೋಜನೆ ಬಗ್ಗೆ ಹೋರಾಟ ಮಾಡಿದ್ದೇನೆ. ಯೋಜನೆ ಅನುಷ್ಠಾನಕ್ಕೆ ಕಾಲ ಕೂಡಿ ಬಂದಿದೆ.

ಕಾಮಗಾರಿ ವೇಳೆಯಲ್ಲಿ ರಸ್ತೆ ಅಗೆದು ಪೈಪ್ ಲೈನ್ ಅಳವಡಿಸಿದ ಮೇಲೆ, ಬೇಗನೇ ರಸ್ತೆಯನ್ನು ಮರು ನಿರ್ಮಿಸಿ. ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಿ. ವಾರ್ಡ್ ಒಂದರ ಕಾಮಗಾರಿ ಪೂರ್ಣಗೊಳಿಸಿದ ಮೇಲೆ ಇನ್ನೊಂದು ಕಡೆ ಕಾಮಗಾರಿ‌ ಆರಂಭಿಸಿ. ಕಾಮಗಾರಿಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಿ ದೂರುವಂತಾಗಬಾರದು ಎಂದು ಸೂಚನೆ ನೀಡಿದರು.

ಹುಬ್ಬಳ್ಳಿ ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಜನೆ ಜಾರಿಯಾಗುತ್ತಿವೆ. ಸ್ಮಾರ್ಟ್ ಸಿಟಿ, ಏರ್ಪೋರ್ಟ್ ಅಭಿವೃದ್ಧಿ, ಕೇಂದ್ರ ರಸ್ತೆ ನಿಧಿ ಅಡಿ ರಸ್ತೆ ನಿರ್ಮಾಣ, ತ್ವರಿತ ಬಸ್ ಸಾರಿಗೆ ಸೇವೆ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ದೊಡ್ಡ ಕೈಗಾರಿಕೆಗಳೂ ಆಗಮಿಸಿತ್ತಿವೆ. ಕೈಗಾರಿಕಗಳ ನೀರಿನ ಅವಶ್ಯಕತೆಯನ್ನು ಸಹ ಪೂರೈಸಲಾಗುವುದು.ಜಲಧಾರೆ ಯೋಜನೆಯ ಮೂಲಕ ಗ್ರಾಮೀಣ ಭಾಗಕ್ಕೂ ನಿರಂತರ ನೀರು ಸರಬರಾಜು ಮಾಡಲಾಗುವುದು ಎಂದರು.

ಕೆ.ಯು.ಐ.ಡಿ.ಎಫ್.ಸಿ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಯಕ್ರಮದಲ್ಲಿ ಕಳಸಕ್ಕೆ ನೀರು ಭರಿಸುವುದರ ಮೂಲ ಗಂಗಾವತರಣ ಚಾಲನೆ ನೀಡಿ ಮಾತನಾಡಿದರು.

ಒಳಚರಂಡಿ ಮಂಡಳಿಯ ಶರಣಪ್ಪ ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಕೆ.ಯು.ಡಿ.ಐ.ಎಫ್.ಸಿ ಕಾರ್ಯಪಾಲ ಅಭಿಯಂತರ ಎಂ.ಕೆ.ಮನಗುಂಡ, ಸ್ಮೆಕ್ (SMEC) ಇಂಟರ್ ನ್ಯಾಶನಲ್ ಸಂಸ್ಥೆ ಮಧುಸೂಧನ ರಾವ್, ಎಲ್ ಆ್ಯಂಡ್ ಟಿ ಕಂಪನಿಯ ಶಿಲ್ಪಾ ಜೋಶಿ ಯೋಜನೆಯ ಸ್ಥಿತಿಗತಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಯೋಜನೆ ಕುರಿತಾದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಶಿ. ಜಡಿ, ಶಾಸಕರಾದ ಪ್ರದೀಪ್ ಶೆಟ್ಟರ್, ಅಯ್ಯಪ್ಪ ದೇಸಾಯಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಉಪಸ್ಥಿತಿರಿದ್ದರು. ಮಹಾನಗರ ಪಾಲಿಕೆ‌ ಆಯುಕ್ತ ಡಾ. ಇಟ್ನಾಳ್ ಸ್ವಾಗತಿಸಿದರು. ಕೆ.ಯು.ಐ.ಡಿ.ಎಫ್. ಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಟಿ ರೇಜು ವಂದಿಸಿದರು.


Spread the love

Leave a Reply

Your email address will not be published. Required fields are marked *