ವಿನಯ ಕುಲಕರ್ಣಿ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
1 min readಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನ ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.
ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ನವೆಂಬರ್ 5ರಂದು ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನ ಮಾಡಿತ್ತು. ಅದಾದ ನಂತರ ಮೂರು ದಿನ ತನ್ನ ಕಸ್ಟಡಿಗೆ ಪಡೆದು ವಿಚಾರಣೆಯನ್ನ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಹಾಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನಿಗಾಗಿ ಮೊದಲು ಅರ್ಜಿಯನ್ನ ಸಲ್ಲಿಸಲಾಗಿತ್ತಾದರೂ, ಕೊನೆ ಗಳಿಗೆ ಮತ್ತೆ ಅರ್ಜಿಯನ್ನ ಹಿಂದೆ ಪಡೆಯಲಾಗಿತ್ತು. ಇದಾದ ಕೆಲವು ದಿನಗಳ ನಂತರ ಜಾಮೀನಿಗಾಗಿ ಅರ್ಜಿಯನ್ನ ಸಲ್ಲಿಸಿದ್ದು, ವಿಚಾರಣೆಯನ್ನ ಡಿಸೆಂಬರ್ 4ಕ್ಕೆ ಮುಂದೂಡಲಾಗಿತ್ತು. ಇಂದು ನಡೆದ ವಿಚಾರಣೆಯಲ್ಲಿ ಮತ್ತೆ ಮುಂದೂಡಲಾಗಿದೆ.
ಈ ಬಗ್ಗೆ ನ್ಯಾಯಾಲಯದಿಂದ ಸಿಬಿಐಗೂ ನೋಟೀಸ್ ಹೋಗಿತ್ತು, ಬಂಧಿತ ವಿನಯ ಕುಲಕರ್ಣಿಯವರಿಗೆ ಜಾಮೀನು ಸಂಬಂಧ ತಕರಾರು ಸಲ್ಲಿಸಲಾಗಿದೆ. ಈಗಾಗಲೇ ವಿನಯ ಕುಲಕರ್ಣಿ ಅವರ ನ್ಯಾಯಾಂಗ ಬಂಧನ ಡಿಸೆಂಬರ್ 7ರ ವರೆಗೆ ಮುಂದುವರೆದಿರುವುದನ್ನ ಇಲ್ಲಿ ಸ್ಮರಿಸಬಹುದು.