ಕೋನರೆಡ್ಡಿಯವರನ್ನ ಕರೆದುಕೊಂಡೇ “MLA ಅಭ್ಯರ್ಥಿ”ಗಾಗಿ ಅರ್ಜಿ ಕೊಟ್ಟ ವಿನೋದ ಅಸೂಟಿ…

ಬೆಂಗಳೂರು: ಕನಕದಾಸ ಜಯಂತಿಯ ಶುಭ ದಿನದಂದು ನವಲಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ವಿನೋದ ಅಸೂಟಿಯವರು ಕೆಪಿಸಿಸಿಗೆ ಎರಡು ಲಕ್ಷ ರೂಪಾಯಿ ಚೆಕ್ ಜೊತೆಗೆ ಅರ್ಜಿ ಸಲ್ಲಿಸಿದರು.

ಮೊದಲಿಂದಲೂ ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಳೆಸಿಕೊಂಡು ಹೋಗುತ್ತಿರುವ ವಿನೋದ ಅಸೂಟಿ, ಮತ್ತಷ್ಟು ಪ್ರೌಢಿಮೆಯನ್ನ ಮೆರೆದಿದ್ದಾರೆ. ಜೆಡಿಎಸ್ ಬಿಟ್ಟು ಕೈ ಹಿಡಿದಿರುವ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯವರನ್ನ ಕರೆದುಕೊಂಡು ಹೋಗಿ ಅರ್ಜಿ ಸಲ್ಲಿಸಿ, ತಮ್ಮ ಗೆಲುವಿಗಾಗಿ ಕೈ ಜೋಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಂದು ಕೋನರೆಡ್ಡಿಯವರು ತಮ್ಮ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದು ಇಲ್ಲಿದೆ ನೋಡಿ…
ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸ ಜಯಂತಿಯ ಶುಭ ದಿನದಂದು ಧಾರವಾಡ ಜಿಲ್ಲೆಯ ರೈತರ ಗಂಡು ಮೆಟ್ಟಿದ ನಾಡು ನವಲಗುಂದ ವಿಧಾನಸಭಾ ಕ್ಷೇತ್ರ-69ಕ್ಕೆ ಕಾಂಗ್ರೆಸ್ ಪಕ್ಷದಿಂದ ಮುಂಬರುವ 2023ರ ವಿಧಾಸಭಾ ಚುನಾವಣೆಗೆ ಸ್ಪರ್ಧಿಸಲು ನವಲಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ಅರ್ಜಿ ಸಲ್ಲಿಸುವ ಮೊದಲನೇ ದಿನ ದಿನಾಂಕ : 05/11/2022 ರಂದು ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಜಯಂತಿಯ ಶುಭದಿನವಾದ ಇಂದು ದಿನಾಂಕ : 11/11/2022 ರಂದು ಬೆಂಗಳೂರಿನಲ್ಲಿ ಮತ್ತೇ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿನೋದ ಅಸೂಟಿ ಅವರ ಜೊತೆ ಜಂಟಿಯಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದರು. ಕಾಂಗ್ರೆಸ್ ಪಕ್ಷ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 2004, 2008, 2018 ರಲ್ಲಿ ಕಾಂಗ್ರೆಸ್ ಜಯಗಳಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಬಾರಿ ಹೆಚ್ಚು ಸಂಘಟನೆಯನ್ನು ಮಾಡಿ ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕಾಗಿದೆ ಎಂದು ಎನ್.ಹೆಚ್. ಕೋನರಡ್ಡಿ ಹೇಳಿದರು. 2023 ಕ್ಕೆ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ಕನ್ನಡಿಗ AICC ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಸಂಘಟನಾ ಚತುರ KPCC ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ, KPCC ರಾಜ್ಯ ಪ್ರಚಾರ ಸಮೀತಿ ಅಧ್ಯಕ್ಷರಾದ ಶ್ರೀ ಎಂ.ಬಿ. ಪಾಟೀಲ, AICC ಸದಸ್ಯರುಗಳಾದ ಶ್ರೀ ಹೆಚ್.ಕೆ. ಪಾಟೀಲ, ಶ್ರೀ ದಿನೇಶ ಗುಂಡೂರಾವ್, ಶ್ರೀ ಕೆ.ಹೆಚ್. ಮುನಿಯಪ್ಪ, ಕಾರ್ಯಾಧ್ಯಕ್ಷರುಗಳಾದ ಶ್ರೀ ಸಲಿಂ ಅಹ್ಮದ, ಶ್ರೀ ಸತೀಶ ಜಾರಕಿಹೊಳಿ, ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಧೃವನಾರಾಯಣ, ಶ್ರೀ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ 2023 ರ ವಿಧಾನಸಭೆಗೆ ಹೆಚ್ಚು ಸ್ಥಾನ ಗೆಲ್ಲುವ ಗುರಿಯೊಂದಿಗೆ ನವಲಗುಂದ ವಿಧಾನಸಭಾ ಕ್ಷೇತ್ರ-69ಕ್ಕೆ ಶ್ರೀ ಎನ್.ಹೆಚ್. ಕೋನರಡ್ಡಿ ಹಾಗೂ ಶ್ರೀ ವಿನೋದ ಅಸೂಟಿ ಅವರು ಜಂಟಿಯಾಗಿ ಅರ್ಜಿ ಸಲ್ಲಿಸಿದ್ದು ವಿಶೇಷವಾಗಿತ್ತು. ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಲು ಸೂಚಿಸಿದರು.