ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ

ಧಾರವಾಡ: ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನ ಧಾರವಾಡದ ಹೈಕೋರ್ಟ್ ವಜಾ ಮಾಡಿದೆ.
ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯ ವಿಚಾರಣೆ ನಿನ್ನೆಯಿಂದ ನಡೆದಿತ್ತು. ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದರು. ಇಂದು ಹೈಕೋರ್ಟ್ ನ್ಯಾಯಾಧೀಶ ಕೆ.ಎನ್.ನಟರಾಜ ವಾದವನ್ನ ಕೇಳಿದ ನಂತರ ಜಾಮೀನು ಅರ್ಜಿಯನ್ನ ವಜಾ ಮಾಡಿ ಆದೇಶ ನೀಡಿದ್ದಾರೆ.
ನವೆಂಬರ್ ಐದರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ಬಂಧನ ಮಾಡಿತ್ತು. ಇದಾದ ನಂತರ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ಅರ್ಜಿ ವಜಾ ಆದ ನಂತರ ಹೈಕೋರ್ಟಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟನಲ್ಲಿ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸುವ ಅನಿವಾರ್ಯತೆ ಎದುರಾಗಿದೆ.