ದಟ್ಟ ಕಾನನದ ನಡುವೆ ಗಟ್ಟಿ ಧ್ವನಿ: ಸದ್ದಿಲ್ಲದೇ ನಡೆಯುತ್ತಿದೆ ಶಿಕ್ಷಣದ ಕ್ರಾಂತಿ
ಉತ್ತರಕನ್ನಡ: ದಟ್ಟ ಕಾನನದ ನಡುವಿನ ಈ ಊರಿನಲ್ಲಿ ನಿತ್ಯವೂ ತರಗತಿಗಳು ನಡೆಯುತ್ತಿವೆ. ಅಲ್ಲಿ ಓದಿಸಲು ಯಾರೂ ಬರೋದೆಯಿಲ್ಲ, ಮಕ್ಕಳು ಮಾತ್ರ ಪ್ರೀತಿಯಿಂದ ಅಭ್ಯಾಸ ಮಾಡ್ತಾರೆ. ಇಂತಹದಕ್ಕೆ ಕಾರಣವಾಗಿದ್ದು ಒಂದು ಧ್ವನಿ… ಆ ಧ್ವನಿಯೇ ಇವರಿಗೆ ಶಿಕ್ಷಣ. ಅಚ್ಚರಿಯಾಗಬೇಡಿ ಪೂರ್ಣ ಸುದ್ದಿ ನೋಡಿ…
500 ಕಿಲೋಮೀಟರ್‌ಗೂ ಅಧಿಕ ದೂರದ ನಗರದಲ್ಲಿರುವ ಶಿಕ್ಷಕಿಯ ಧ್ವನಿಗೆ ಮಕ್ಕಳು ಶ್ರದ್ಧೆಯಿಂದ ಕಿವಿಯಾಗುತ್ತಾರೆ. ಸಂವಹನ ನಡೆಸುತ್ತಾರೆ. ಆದರೆ, ಶಿಕ್ಷಕಿ ಮಾತ್ರ ‘ಅದೃಶ್ಯ’ವಾಗಿಯೇ ಇರುತ್ತಾರೆ! ಈ ರೀತಿಯ ತರಗತಿ ನಡೆಯುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಡೇರಿಯಾ ಎಂಬ ಕುಗ್ರಾಮದಲ್ಲಿ. ಇಲ್ಲಿನ ಬುಡಕಟ್ಟು ಜನಾಂಗದ 10 ವಿದ್ಯಾರ್ಥಿಗಳಿಗೆ ಮೈಸೂರಿನ ಒಂಟಿಕೊಪ್ಪಲು ನಿವಾಸಿ ಆರ್.ಪೂರ್ಣಿಮಾ ನಿತ್ಯವೂ ಮೊಬೈಲ್ ಫೋನ್ ಮೂಲಕ ಇಂಗ್ಲಿಷ್ ಭಾಷೆಯನ್ನು ಬೋಧಿಸುತ್ತಿದ್ದಾರೆ. ನಾಲ್ಕನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಜೋಯಿಡಾ ತಾಲ್ಲೂಕು ಕೇಂದ್ರದಿಂದ 12 ಕಿಲೋಮೀಟರ್ ದೂರದ ಈ ಗ್ರಾಮದಲ್ಲಿ ಒಂದೆರಡು ಮನೆಗಳ ಬಳಿ ಮಾತ್ರ ಮೊಬೈಲ್ ಸಿಗ್ನಲ್ ಸಿಗುತ್ತದೆ. ಅದೂ ಒಂದೆರಡು ‘ಕಡ್ಡಿ’ಗಳಿಗೆ ಸೀಮಿತವಾಗಿರುತ್ತದೆ. ಇಲ್ಲಿ ಇಂಟರ್‌ನೆಟ್ ಸಂಪರ್ಕವಂತೂ ದೂರದ ಮಾತು. ಹಾಗಾಗಿ ಆನ್‌ಲೈನ್ ತರಗತಿ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಪೂರ್ಣಿಮಾ, ಮೊಬೈಲ್ ಫೋನ್ ಮೂಲಕವೇ ಜ್ಞಾನಧಾರೆ ಎರೆಯುತ್ತಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಅವರ ಹುಮ್ಮಸ್ಸಿಗೆ, ಜೋಯಿಡಾದ ಕುಣಬಿ ಸಮಾಜದ ಅಧ್ಯಕ್ಷ ಡಾ.ಜಯಾನಂದ ಡೇರೇಕರ್ ಜೊತೆಯಾದರು. ಒಂದು ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ ಸ್ಪೀಕರ್ ಖರೀದಿಸಿ ತಂದರು. ಮೊಬೈಲ್ ಸಿಗ್ನಲ್ ಸಿಗುವ ಮನೆಯೊಂದರ ಕಿಟಕಿಯಲ್ಲಿಟ್ಟರು. ಬಳಿಕ ಬ್ಲೂಟೂಥ್ ಮೂಲಕ ಸ್ಪೀಕರ್‌ಗೆ ಸಂಪರ್ಕ ನೀಡಿ ಧ್ವನಿವರ್ಧಿಸಿದರು. ಈ ರೀತಿ ಸುಮಾರು ಒಂದು ತಿಂಗಳಿನಿಂದ ನಿತ್ಯವೂ ಸಂಜೆ 4.30ರಿಂದ ಒಂದು ತಾಸು ತರಗತಿ ನಡೆಯುತ್ತಿದೆ.
‘ಕೊರೊನಾ ಲಾಕ್‌ಡೌನ್‌ನ ಈ ದಿನಗಳಲ್ಲಿ ಎಲ್ಲೆಡೆ ಆನ್‌ಲೈನ್ ಶಿಕ್ಷಣದ್ದೇ ಚರ್ಚೆಯಾಗುತ್ತಿದೆ. ಆದರೆ, ಕಾಡಿನ ಮಧ್ಯೆ ಇರುವ ಈ ಊರಿನಲ್ಲಿ ಅದು ಕಷ್ಟ ಸಾಧ್ಯ. ಅದಕ್ಕೆ ಮೊಬೈಲ್ ಫೋನ್ ಮೂಲಕ ತರಗತಿ ಮುಂದುವರಿಸಲಾಗಿದೆ. ಇಂತಹ ಶಿಕ್ಷಕಿಗೆ ನಮ್ಮದೊಂದು ನಮನ.