ತಬ್ಲೀಗಿ ಜಮಾತ್ ವಿರುದ್ಧ ಕೊರೋನಾ ಸಮಯದಲ್ಲಿ ಕಾರ್ಯಕ್ರಮ: ಕನ್ನಡದ ಎರಡು ಪ್ರಮುಖ ಚಾನಲ್ ಗಳಿಗೆ ದಂಡ…!
1 min readನವದೆಹಲಿ: ತಬ್ಲೀಗಿ ಜಮಾತ್ ಸಂಘಟನೆಯನ್ನ ಗುರಿಯಾಗಿಸಿ ಸುದ್ದಿ ಮಾಡಿರುವ ಕನ್ನಡದ ಎರಡು ಸುದ್ಧಿ ವಾಹಿನಿಗಳ ಆಡಳಿತ ಮಂಡಳಿಗಳಿಗೆ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್ ಬಿಎಸ್ಎ) ದಂಡ ವಿಧಿಸಿದ್ದು, ಆಂಗ್ಲ ಸುದ್ದಿ ವಾಹಿನಿಗೆ ಎಚ್ಚರಿಕೆ ನೀಡಿದೆ.
ದೆಹಲಿಯ ನಿಜಾಮುದ್ಧೀನ ಮರ್ಕಜ್ ನಲ್ಲಿ 2020ರ ಮಾರ್ಚ ತಿಂಗಳಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ನ ಸಮಾವೇಶ ಮತ್ತು ಅದರಲ್ಲಿ ಭಾಗವಹಿಸಿದ್ದ ಸಾವಿರಾರೂ ಜನ ಸದಸ್ಯರೇ ದೇಶದಲ್ಲಿ ಕೊರೋನಾ ಸೋಂಕು ಹರಡಲು ಕಾರಣ ಎಂಬ ರೀತಿಯಲ್ಲಿ ಸುದ್ದಿಯನ್ನ ಪ್ರಸಾರ ಮಾಡಿದ್ದ ಕನ್ನಡದ ‘ನ್ಯೂಸ್-18’ ಸುದ್ದಿ ವಾಹಿನಿಗೆ 1 ಲಕ್ಷ ರೂಪಾಯಿ ಹಾಗೂ ಸುವರ್ಣ ನ್ಯೂಸ್ ವಾಹಿನಿಗೆ 50 ಸಾವಿರ ರೂಪಾಯಿ ದಂಡವನ್ನ ವಿಧಿಸಲಾಗಿದೆ.
7ದಿನದ ಒಳಗಾಗಿ ದಂಡ ಪಾವತಿಸುವಂತೆ ಎರಡೂ ಸಂಸ್ಥೆಗಳಿಗೆ ಸುಪ್ರೀಂಕೋರ್ಟನ ನಿವೃತ್ತ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಪ್ರಾಧಿಕಾರವು ಜೂನ್ 16ರಂದು ಈ ಆದೇಶವನ್ನ ಹೊರಡಿಸಿದೆ.
ಜೂನ್ 23ರಂದು ರಾತ್ರಿ 9ಗಂಟೆಗೆ ಆಧಾರರಹಿತ ಸುದ್ಧಿ ಪ್ರಸಾರ ಮಾಡಿದ್ದಕ್ಕೆ ಬೇಷರತ್ ಕ್ಷಮೆ ಕೋರುವಂತೆ ‘ನ್ಯೂಸ್-18’ ಸುದ್ದಿ ವಾಹಿನಿಗೆ ಸೂಚಿಸಲಾಗಿದೆ. ಯೂಟ್ಯೂಬ್, ವೆಬೆಸೈಟ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ಧಿಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ವೀಡಿಯೋ ಮತ್ತು ಸುದ್ದಿ ತುಣುಕುಗಳನ್ನ ತೆಗೆದು ಹಾಕುವಂತೆ ಪ್ರಾಧಿಕಾರ ನಿರ್ದೇಶನ ನೀಡಿದೆ.
ತಬ್ಲೀಗಿ ಜಮಾತ್ ಸಂಘಟನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಲು ಬಂದಿದ್ದ ವ್ಯಕ್ತಿಗಳು ಆಕ್ಷೇಪಾರ್ಹ ಅಭಿಪ್ರಾಯ ಮಂಡಿಸಿದ್ದು, ಅಂಥ ವ್ಯಕ್ತಿಗಳನ್ನ ಮತ್ತೆ ಚರ್ಚೆಗೆ ಆಹ್ವಾನಿಸದಂತೆ ಆಂಗ್ಲದ ‘ಟೈಮ್ಸ್ ನೌ’ ಸುದ್ದಿ ವಾಹಿನಿಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ಮೂಲದ ಕ್ಯಾಂಪೇನ್ ಅಗೇನೇಸ್ಟ್ ಹೇಟ್ ಸ್ಪೀಚ್ (ಸಿಎಎಚ್ಎಸ್) ಸಂಸ್ಥೆಯು ಈ ಮೂರು ಖಾಸಗಿ ಸುದ್ಧಿ ವಾಹಿನಿಗಳು ಪ್ರಸಾರ ಮಾಡಿದ್ದ ದ್ವೇಷಪೂರಿತ ಸುದ್ದಿಗಳ ವಿರುದ್ಧ ಎನ್ಬಿಎಸ್ಎಗೆ ದೂರು ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆದು, ತಬ್ಲೀಗಿ ಜಮಾತ್ ಕುರಿತು ಪ್ರಸಾರವಾದ ಸುದ್ಧಿ ಮತ್ತು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ರೀತಿಯು ಆಕ್ಷೇಪಾರ್ಹವಾಗಿತ್ತು. ವರದಿಯಲ್ಲಿ ಬಳಸಲಾದ ಭಾಷೆ ಪೂರ್ವಾಗ್ರಹದಿಂದ ಕೂಡಿತ್ತೆಂದು ಆದೇಶದಲ್ಲಿ ತಿಳಿಸಲಾಗಿದೆ.