ಸಿದ್ದಪ್ಪನಾಗಿದ್ದ ಶಿದ್ಲಿಂಗಪ್ಪ- 21ವರ್ಷದ ನಂತರ ಸಿಕ್ಕಿಬಿದ್ದ- ಶಹರ ಠಾಣೆ ಪೊಲೀಸರಿಗೆ ಆಯುಕ್ತರ ಬಹುಮಾನ
ಹುಬ್ಬಳ್ಳಿ: ರಾಧಾಕೃಷ್ಣನಗರದಲ್ಲಿ ಮಹೇಶ ಟೇಲರ್ ಅಂಗಡಿ ಕೀಲಿ ಮುರಿದು ಕಳ್ಳತನ ಮಾಡಿ ಆರೋಪಿಯಾಗಿದ್ದ ವ್ಯಕ್ತಿಯೋರ್ವ ಜಾಮೀನು ಪಡೆದು ಕಳೆದ 21ವರ್ಷದಿಂದ ನಾಪತ್ತೆಯಾಗಿದ್ದ. ತನ್ನ ಹೆಸರನ್ನೇ ಬದಲಿಸಿಕೊಂಡು ಜೀವಿಸುತ್ತಿದ್ದವನನ್ನ ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮರಗೋಳದ ಚಿಕ್ಕೇರಿ ಪ್ಲಾಟ್ ಸುಣಗಾರಬಟ್ಟಿ ನಿವಾಸಿಯಾಗಿದ್ದ ಶಿದ್ಲಿಂಗಪ್ಪ ಚಂದ್ರಾಮಪ್ಪ ಬಾಗಲಕೋಟೆ ಅಲಿಯಾಸ್ ಬಾಗಲೇ ಎಂಬಾತನೇ ಸಿದ್ದಪ್ಪನಾಗಿ ಅಲೆದಾಡುತ್ತಿದ್ದ.
ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆತಪ್ಪಿಸಿಕೊಂಡಿದ್ದ ಶಿದ್ಲಿಂಗಪ್ಪನನ್ನ ಹಿಡಿಯುವಲ್ಲಿ ಎಸ್.ಬಿ.ಕಟ್ಟಿಮನಿ ಯಶಸ್ವಿಯಾಗಿದ್ದಾರೆ. ಆತನ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿ, ಆತನ ಪಿಂಗರ್ ಪ್ರಿಂಟ್ ಮೂಲಕ ಸಿದ್ದಪ್ಪನಾಗಿದ್ದ ಶಿದ್ಲಿಂಗಪ್ಪನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಎಂ.ಎಸ್. ಪಾಟೀಲ ನೇತೃತ್ವದಲ್ಲಿ ಠಾಣೆಯ ಪಿ.ಎಸ್.ಐ ಬಿ.ಎನ್. ಸಾತನ್ನವರ, ಎ.ಎಸ್.ಐ ಆರ್.ಬಿ.ಚಪ್ಪರಮನಿ ಹಾಗೂ ಸಿಬ್ಬಂದಿಯವರಾದ ಎಸ್.ಬಿ. ಕಟ್ಟಿಮನಿ, ಕೆ.ಎಚ್.ರಗಣಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಪತ್ತೆ ಮಾಡಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ತನಿಖೆಯನ್ನ ಪ್ರಶಂಸಿಸಿ ಪೊಲೀಸ್ ಆಯುಕ್ತ ಆರ್.ದಿಲೀಪ್ ಬಹುಮಾನ ಘೋಷಣೆ ಮಾಡಿದ್ದಾರೆ.
 
                       
                       
                       
                       
                      
 
                        
 
                 
                 
                